ಸ್ಯಾಂಡಲ್ವುಡ್ ಬ್ಯೂಟಿಗಳಲ್ಲಿ ಸದ್ಯಕ್ಕೆ ಬ್ಯುಸಿ ಇರುವ ನಟಿಯರೆದಂದರೆ ಹರಿಪ್ರಿಯಾ, ರಚಿತಾ ರಾಮ್, ಅದಿತಿ ಪ್ರಭುದೇವ ಅಂತ ಹೇಳಿದ್ರೆ ತಪ್ಪಾಗಲ್ಲ. ಅದ್ರಲ್ಲೂ ಹರಿಪ್ರಿಯಾ ಕೈಗೆ ಸಿನಿಮಾಗಳು ಸಿಕ್ಕರೂ ನಟಿಸಲು ಸಮಯವಿಲ್ಲದೆ ಆ ಸಿನಿಮಾವನ್ನು ಕೈಚೆಲ್ಲಿದ್ದೂ ಉಂಟು. ಇತ್ತೀಚೆಗೆ ಕಸ್ತೂರಿ ಮಹಲ್ ಚಿತ್ರದಲ್ಲಿ ನಟಿಸಲು ಸಮಯವಿಲ್ಲ ಎಂದು ಹೇಳಿರುವುದೇ ಇದಕ್ಕೆ ಸಾಕ್ಷಿ. ಹಾಗಾದ್ರೆ ನೀರ್ದೋಸೆ ಬೆಡಗಿ ಕೈಲಿ ಎಷ್ಟು ಸಿನಿಮಾಗಳಿವೆ ಅಂದ್ರಾ.. ಬರೋಬ್ಬರಿ ಆರು ಚಿತ್ರಗಳು ಹರಿಪ್ರಿಯ ಕೈಯಲ್ಲಿವೆಯಂತೆ.
ಸದ್ಯ ಹರಿಪ್ರಿಯಾರ ಸಿನಿಮಾಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ತಲಾ ಒಂದೊಂದು ಸೆಟ್ಟೇರಿವೆ. ಬೆಂಗಳೂರಿನಲ್ಲಿ ದಿಗಂತ್ ಜೊತೆಗಿನ ಸಿನಿಮಾವಾದ್ರೆ, ಮೈಸೂರಿನಲ್ಲಿ ಸತೀಶ್ ನೀನಾಸಂ ಜೊತೆಗಿನ ‘ಪೆಟ್ರೋಮ್ಯಾಕ್ಸ್’. ‘ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿ ಮನೆ ಬ್ರೋಕರ್ ಪಾತ್ರಕ್ಕೆ ಹರಿಪ್ರಿಯಾ ಬಣ್ಣ ಹಚ್ಚುತ್ತಿದ್ದಾರೆ.
ಇನ್ನು ಉಪ್ಪಿ ಜೊತೆಯಲ್ಲೂ ಪರದೆ ಹಂಚಿಕೊಳ್ಳಲು ಸಿದ್ಧರಾಗಿರುವ ಹರಿಪ್ರಿಯಾ, ಲಗಾಮ್ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ಈ ಚಿತ್ರವು ಸದ್ಯದಲ್ಲೇ ಸೆಟ್ಟೇರಲಿದೆ ಎಂಬ ಮಾಹಿತಿಗಳು ಹರಿದಾಡುತ್ತಿವೆ. ಗುರು ನಂದನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹ್ಯಾಪಿ ಎಂಡಿಂಗ್ ಕೂಡ ಬಹುತೇಕ ಚಿತ್ರೀಕರಣ ಮುಗಿಸಿದೆ.
ಮತ್ತೆರಡು ಸಿನಿಮಾಗಳು ಇನ್ನೆರಡು ದಿನಗಳಲ್ಲಿ ಅಂದ್ರೆ ದಸರಾ ಸಂಭ್ರಮ ವಿಜಯದಶಮಿ ದಿವಸ ಪ್ರಕಟಣೆ ಆಗಲಿವೆಯಂತೆ. ಇವಷ್ಟು ಅಲ್ಲದೆ ಶಿವರಾಜಕುಮಾರ್ ಅಭಿನಯದ ಹಾಗೂ ಯೋಗರಾಜ್ ಭಟ್ ನಿರ್ದೇಶನ ಎಂದು ಹೇಳಲಾದ ಚಿತ್ರಕ್ಕೂ ಸಹ ಹರಿಪ್ರಿಯಾ ಎಂದು ಹೆಸರು ಕನ್ಫರ್ಮ್ ಆಗಿದೆ ಎನ್ನಲಾಗ್ತಿದೆ.