ಖಾಸಗಿ ವಾಹಿನಿಯಲ್ಲಿ ಟೆಲಿ ಅಂತ್ಯಾಕ್ಷರಿ ಕಾರ್ಯಕ್ರಮದ ನಿರೂಪಕಿಯಾಗಿ ಕಿರುತೆರೆ ಲೋಕಕ್ಕೆ ಕಾಲಿಟ್ಟ ಕರಾವಳಿ ಕುವರಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಟಿವಿ ವಾಹಿನಿಯ ಡಿಮ್ಯಾಂಡಪ್ಪೊ ಡಿಮ್ಯಾಂಡೋ ಕಾರ್ಯಕ್ರಮದ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾದ ಅನುಶ್ರೀಗೆ ಇಂದು ಜನ್ಮ ದಿನದ ಸಂಭ್ರಮ.
ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅನುಶ್ರೀ ಅತ್ಯಂತ ಬ್ಯುಸಿಯಾಗಿದ್ದಾರಂತೆ. ಬಿಡುವಿಲ್ಲದ ಸಮಯದಲ್ಲಿ ಅಭಿಮಾನಿಗಳ ಶುಭಾಶಯ, ಹಾರೈಕೆಗೆ ಧನ್ಯವಾದಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕವೇ ತಿಳಿಸಿದ್ದಾರೆ. ಆದರೆ, ನಾಳೆ ನಿಮ್ಮೆಲ್ಲರನ್ನು ಮಾತನಾಡಿಸುತ್ತೇನೆ. ಹೇಗೆ, ಎಲ್ಲಿ ಎಂಬುದನ್ನು ನಾನೇ ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕಾಮಿಡಿ ಕಿಲಾಡಿಗಳು, ಟ್ವೆಂಟಿ ಟ್ವೆಂಟಿ ಕಾಮಿಡಿ ಕಪ್, ಕುಣಿಯೋಣು ಬಾರಾ, ನಮಸ್ತೆ ಕಸ್ತೂರಿ, ಸ್ಟಾರ್ ಲೈವ್, ರೀಲ್ ಸುದ್ದಿ, ಸೂಪರ್ ಸೀಸನ್ 1 ಮತ್ತು 2, ಚಿನ್ನದ ಬೇಟೆ, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ, ಸರಿಗಮಪ ಸಂಗೀತ ಕಾರ್ಯಕ್ರಮ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಸಾಕಷ್ಟು ಶೋಗಳ ನಿರೂಪಕಿಯಾಗಿ ಗಮನ ಸೆಳೆದಿರುವ ಅನುಶ್ರೀ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ರು.
ಇಷ್ಟೆ ಅಲ್ಲದೇ ಬೆಂಕಿಪಟ್ಟಣ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಅನುಶ್ರೀ ಕೋರಿ ರೊಟ್ಟಿ ಎಂಬ ತುಳು ಸಿನಿಮಾದಲ್ಲಿಯೂ ಅಭಿನಯಿಸಿದ್ದರು. ಕಂಠದಾನ ಕಲಾವಿದೆಯಾಗಿ ಮುರಳಿ ಮೀಟ್ಸ್ ಮೀರಾ ಸಿನಿಮಾದಲ್ಲಿ ನಾಯಕಿಗೆ ಕಂಠದಾನ ಮಾಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಫಿಲಂ ಪ್ರಶಸ್ತಿಯನ್ನು ಕೊಡಲಾಗಿದೆ.
ಝೀ ಕುಟುಂಬ ಅವಾರ್ಡ್ಸ್ ಕೊಡಮಾಡುವ ಬೆಸ್ಟ್ ನಿರೂಪಕಿ ಅವಾರ್ಡ್, ಕೆಂಪೇಗೌಡ ಪ್ರಶಸ್ತಿ, ಮೋಸ್ಟ್ ಡಿಸೈರೇಬಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ನಿರೂಪಕಿ ಅನುಶ್ರೀ ಇಂದು 33ನೇ ವಸಂತಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ.