ಲಾಕ್ಡೌನ್ ವೇಳೆ ಸಿನಿಮಾ ಸೆಲಬ್ರಿಟಿಗಳು ಮನೆ ಕೆಲಸದವರಿಗೆ ರಜೆ ನೀಡಿ ತಮ್ಮ ಕೆಲವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟ ನಟಿಯರು ಮನೆ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೀಗ ನಾದಬ್ರಹ್ಮ ಎಂದೇ ಹೆಸರಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರ ಸರದಿ.
ಹಂಸಲೇಖ, ಹೆಸರು ಕೇಳಿದೊಡನೆ ಅವರು ಸಂಗೀತ ನಿರ್ದೇಶಿಸಿರುವ ಹಾಡುಗಳು ನೆನಪಾಗುತ್ತದೆ. ಹಾರ್ಮೋನಿಯಂ ಹಿಡಿದು ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡುವ ಹಂಸಲೇಖ ಇಂದು ಹಾರ್ಮೋನಿಯಂ ಕೈಯ್ಯಲ್ಲಿ ಗುದ್ದಲಿ ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಹಾಲಕ್ಷ್ಮಿ ಲೇ ಔಟ್ನಲ್ಲಿರುವ ಹಂಸಲೇಖ ನಿವಾಸದ ಮುಂದಿನ ರಸ್ತೆಯಲ್ಲಿ ಪಾರ್ಕಿಗೆ ಪೈಕ್ ಎಳೆಯಲು ಹಳ್ಳ ತೆಗೆಯಲಾಗಿತ್ತು. ಆದರೆ ಬಹಳ ದಿನಗಳಿಂದ ಆ ಹಳ್ಳವನ್ನು ಮುಚ್ಚಿರಲಿಲ್ಲ. ಲಾಕ್ಡೌನ್ ಆಗಿದ್ದರಿಂದ ಬಿಬಿಎಂಪಿ ರಸ್ತೆ ರಿಪೇರಿ ಮಾಡುವತ್ತ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಹಂಸಲೇಖ ತಾವೇ ಗುದ್ದಲಿ ಹಿಡಿದು ರಸ್ತೆಗೆ ಇಳಿದಿದ್ದಾರೆ
ತಲೆಗೆ ಟವೆಲ್ ಸುತ್ತಿ, ಗುದ್ದಲಿ ಹಿಡಿದು ಹಳ್ಳಕ್ಕೆ ಜೆಲ್ಲಿ ಕಲ್ಲು ಸುರಿದು, ಸಿಮೆಂಟ್ ಹಾಕಿ ಕೊನೆಗೆ ನೀರಿನಿಂದ ಕ್ಯೂರಿಂಗ್ ಮಾಡಿದ್ದಾರೆ. ಬಿಬಿಎಂಪಿ ಮಾಡಬೇಕಾದ ಕೆಲಸವನ್ನು ನಾದಬ್ರಹ್ಮ ತಾವೇ ಮಾಡಿ ಮುಗಿಸಿದ್ದಾರೆ. ಈ ಮೂಲಕ ಆ ರಸ್ತೆಯನ್ನು ವಾಹನಗಳು ಸರಾಗವಾಗಿ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದೇ ಹೇಳಬಹುದು. ಹಂಸಲೇಖ ಈ ಕೆಲಸ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇವರೇನಾ ಹಂಸಲೇಖ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.