ಹೊಸ ಕಥೆ, ಪ್ರೆಶ್ ಕಾನ್ಸೆಪ್ಟ್ ಇಟ್ಟುಕೊಂಡು, ಸ್ಯಾಂಡಲ್ ವುಡ್ಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ "ಗ್ರೂಫಿ" ಅಂತಾ ಟೈಟಲ್ ಇಟ್ಟುಕೊಂಡು, ಯುವ ತಂಡವೊಂದು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಗ್ರೂಫಿ ಚಿತ್ರತಂಡ, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಿತು. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ, ಈ ಸಿನಿಮಾದ ಆಡಿಯೋವನ್ನ ರಿಲೀಸ್ ಮಾಡಿದ್ರು.
ಬಳಿಕ ಮಾತನಾಡಿದ ಅರ್ಜುನ್ ಜನ್ಯ, ಈ ಚಿತ್ರದ ಹಾಡುಗಳು ಕೇಳಲು ಹಾಗೂ ನೋಡಲು ಮಧುರವಾಗಿದೆ. 'ಗ್ರೂಫಿ' ಅಂದ್ರೆ ನನಗನಿಸಿದ್ದು ಹೆಮ್ಮೆ ಅಂದರು. ಈ ಚಿತ್ರದ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹಾಗೂ ನಿರ್ದೇಶಕ ರವಿ ಅರ್ಜುನ್ ಅವರು ನನಗೆ ಬಹಳ ವರ್ಷಗಳ ಸ್ನೇಹಿತರು. 20 ವರ್ಷದ ಹಿಂದೆ ಇದೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವಿ.ಮನೋಹರ್ ಅವರ ಬಳಿ ನನ್ನ ಸಂಗೀತ ಪಯಣ ಆರಂಭವಾಗಿತ್ತು. ನನ್ನ ಸ್ನೇಹಿತನ ಮೊದಲ ಸಿನಿಮಾ ಆಡಿಯೋ ರಿಲೀಸ್ ಇಲ್ಲೇ ಆಗುತ್ತಿರುವುದು ಕಾಕತಾಳೀಯ. ಇಡೀ ತಂಡಕ್ಕೆ ಶುಭವಾಗಲಿ ಅಂತಾ ಅರ್ಜುನ್ ಜನ್ಯ ಹಾರೈಸಿದರು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಸಿನಿಮಾ. ಒಬ್ಬರೇ ಫೋಟೋ ತೆಗೆದುಕೊಂಡರೆ ಸೆಲ್ಫಿ. ಗುಂಪಾಗಿ ತೆಗೆದುಕೊಳ್ಳುವುದನ್ನು ಗ್ರೂಫಿ ಎನ್ನುತ್ತಾರೆ ನಿರ್ದೇಶಕ ರವಿ ಅರ್ಜುನ್. ಈಗಿನ ಯುವಪೀಳಿಗೆ ಚಿತ್ರದ ಶೀರ್ಷಿಕೆಗೆ ಹಾಗೂ ಕಥೆಗೆ ಸಂಬಂಧವಿದೆ ಹಾಗಾಗಿ ಈ ಹೆಸರಿಟ್ಟಿದ್ದೇವೆ. ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವಿದೆ ಅನ್ನೋದು ನಿರ್ದೇಶಕ ರವಿ ಅರ್ಜುನ್ ಮಾತು.
ಇನ್ನು ನಮ್ಮ ತಂಡದ ಮೇಲೆ ಅಭಿಮಾನವಿಟ್ಟು ಬಂದಿರುವ ಅರ್ಜುನ್ ಜನ್ಯ ಅವರಿಗೆ ಗ್ರೂಫಿ ಚಿತ್ರದ ಹಾಡುಗಳನ್ನು ಅರ್ಪಿಸುತ್ತಿದ್ದೇವೆ ಎಂದರು ರವಿ ಅರ್ಜುನ್. ಅರ್ಜುನ್ ಜನ್ಯ ಅವರೊಂದಿಗೆ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸಿ ಅನುಭವವಿರುವ ರವಿ ಅರ್ಜುನ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಯುವ ನಟ ಆರ್ಯನ್ ಮತ್ತು ಯುವ ನಟಿ ಪದ್ಮಶ್ರೀ ಸಿ ಜೈನ್ ಮುಖ್ಯ ಭೂಮಿಕೆಯಲ್ಲಿದ್ದು, ಆರ್ಯನ್ ಈ ಚಿತ್ರದಲ್ಲಿ ಛಾಯಾಗ್ರಾಹಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ನನ್ನದು ಈ ಚಿತ್ರದಲ್ಲಿ ವಿಭಿನ್ನ ಪಾತ್ರ. ಎಲ್ಲರೊಂದಿಗೆ ಸೆಲ್ಫಿ ತೆಗೆದುಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು. ಎಷ್ಟು ಲೈಕ್ ಹಾಗೂ ಕಾಮೆಂಟ್ ಬರುತ್ತದೆ ಎಂದು ಕಾಯುವ ಹುಡುಗಿಯಾಗಿ ಪದ್ಮಶ್ರೀ ಸಿ ಜೈನ್ ಕಾಣಿಕೊಂಡಿದ್ದಾರೆ.
ಇದನ್ನೂ ಓದಿ : 'ಬಡವ ರಾಸ್ಕಲ್' ಸಿನಿಮಾಗೆ ಡಾಲಿ ಧನಂಜಯ್ 'ಉಡುಪಿ ಹೋಟೆಲ್..' ಹಾಡು
ಇದರ ಜೊತೆಗೆ ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಶ್ರೀಧರ್, ಹನುಮಂತೇ ಗೌಡ, ಸಂಗೀತ, ರಜನಿಕಾಂತ್ ಮುಂತಾದವರಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಜಯಂತ್ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್, ರವಿ ಅರ್ಜುನ್ ಬರೆದಿದ್ದಾರೆ. ಸಂತೋಷ್ ವೆಂಕಿ, ಮಾನಸ ಹೊಳ್ಳ, ಅನಿರುದ್ಧ ಶಾಸ್ತ್ರಿ, ವಿಜೇತ್ ಕೃಷ್ಣ ಹಾಗೂ ರಕ್ಷ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ, ನನ್ನ ಗುರುಗಳಾದ ಅರ್ಜುನ್ ಜನ್ಯ ಅವರು ನಾನು ಸಂಗೀತ ನೀಡಿರುವ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದು, ಎಲ್ಲಕ್ಕಿಂತ ಸಂತೋಷ ತಂದಿದೆ ಎಂದರು.
ಅಜಯ್ ಲಕ್ಷ್ಮೀಕಾಂತ್ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ ಮತ್ತು ಇಮ್ರಾನ್ ಸರ್ದಾರಿಯಾ, ಮೋಹನ್ ನೃತ್ಯ ನಿರ್ದೇಶನವಿದೆ. ಬೆಂಗಳೂರು, ಹೊನ್ನಾವರ, ಮಡಿಕೇರಿ ಹಾಗೂ ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಸುಮಾರು ಐವತ್ತು ದಿನಗಳ ಚಿತ್ರೀಕರಣ ನಡೆದಿದ್ದು, ನಿರ್ಮಾಪಕ ಕೆ.ಜಿ.ಸ್ವಾಮಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ಸುಮಾರು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗ್ರೂಫಿ ಚಿತ್ರ ಬಿಡುಗಡೆ ಆಗುತ್ತಿದೆ.