ಮಜ್ಜಿಗೆ ಹುಳಿ, ಭೀಮಸೇನ ನಳಮಹಾರಾಜ, ಒಗ್ಗರಣೆ ಹೀಗೆ ಆಹಾರದ ಹೆಸರು ಇರುವ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ತಯಾರಾಗಿವೆ. ಇದೀಗ ಈ ಸಾಲಿಗೆ 'ರಸಂ' ಎಂಬ ಸಿನಿಮಾ ಸೇರಿದೆ. ಗೌರವ್ ರಾಜೇಶ್, ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಈ ಚಿತ್ರದ ಪೋಸ್ಟರನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ್ದರು. ಈ ಪೋಸ್ಟರಲ್ಲಿ ಸಿಗರೇಟ್, ಡ್ರಿಂಕ್ಸ್, ಸೀರೆ, ತಾಳಿ, ಕಾಲುಂಗುರ ಇದ್ದು ಪೋಸ್ಟರ್ ನೋಡುತ್ತಿದ್ದಂತೆ ಭಾರೀ ಕುತೂಹಲ ಹುಟ್ಟಿಸಿದೆ. ಒಂದು ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ಇದಾಗಿದೆ. ಮದುವೆ ವಯಸ್ಸು ಮೀರಿದ ನಾಯಕ ಹಿರಿಯರ ಆಸೆಯಂತೆ ಮದುವೆ ಆಗುತ್ತಾನೆ. ಹುಡುಗಿಗೂ ಈ ಮದುವೆ ಇಷ್ಟವಿರುವುದಿಲ್ಲ. ಆಕೆ ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದ ನಂತರ ನಾಯಕ ಏನು ಮಾಡುತ್ತಾರೆ..ಮುಂದೆ ಅವರು ಒಟ್ಟಿಗೆ ಬಾಳುತ್ತಾರಾ...ಇಲ್ಲವಾ ಎಂಬುದು ಚಿತ್ರದ ಕಥೆ.

ಥ್ರಿಲ್ಲರ್ ಕಥಾವಸ್ತುವುಳ್ಳ 'ರಸಂ' ಚಿತ್ರೀಕರಣವನ್ನು ಬೆಂಗಳೂರು, ಮಂಗಳೂರು, ಮಂಡ್ಯ ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾಡಲಾಗಿದೆ. ಕಿರುತೆರೆ ನಟ ಅಂಬರೀಶ್ ಸಾರಂಗಿ ಈ ಚಿತ್ರದ ಮೂಲಕ ಬಹಳ ದಿನಗಳ ನಂತರ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಎಂ. ವಿಜ್ಞೇಶ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತುಳು ನಟ ಅರವಿಂದ್ ಬೋಳಾರ್ ಕಾಮಿಡಿ ಕೂಡಾ ಚಿತ್ರದಲ್ಲಿದೆ.

ಜೆ.ಎಂ. ಪ್ರಹ್ಲಾದ್, ಅಭಿ, ಚಿರಾಗ್ ಗೀತರಚನೆಗೆ ಆರ್.ಡಿ.ವರ್ಮಾ ಹಾಗೂ ಸಂದೇಶ್ ಬಾಬು ಜಂಟಿಯಾಗಿ ಸಂಗೀತ ನೀಡಲಿದ್ದಾರೆ. ವಿನಯ್ ಹೊಸ ಗೌಡರ್ ಛಾಯಾಗ್ರಹಣ, ಸತೀಶ್ ರಾಜ್ ಹಾಗೂ ಭರತ್ ಸಂಭಾಷಣೆ ಈ ಚಿತ್ರಕ್ಕಿದೆ. ಅನುಗ್ರಹ ಫಿಲ್ಮ್ಸ್ ಬ್ಯಾನರ್ ಅಡಿ ತಯಾರಾಗುತ್ತಿರುವ 'ರಸಂ' ಚಿತ್ರೀಕರಣ ಡಿಸೆಂಬರ್ನಿಂದ ಆರಂಭವಾಗಲಿದೆ.