ಮೈಸೂರು: ನಾಡ ಹಬ್ಬ ಮೈಸೂರು ದಸರಾ ನಿಮಿತ್ತ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆಪ್ಟೆಂಬರ್ 17 ರಿಂದ 25ರವರೆಗೆ ಹಮ್ಮಿಕೊಂಡಿರುವ ಯುವ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಲು ಖ್ಯಾತ ಚಲನಚಿತ್ರ ನಟ ಗಣೇಶ ಅವರನ್ನು ಆಹ್ವಾನಿಸಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಯುವ ಸಂಭ್ರಮ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿ 278 ಕಾಲೇಜುಗಳು ಯುವ ಸಂಭ್ರಮದಲ್ಲಿ ಭಾಗವಹಿಸುತ್ತಿವೆ ಎಂದರು.
ಈ ಬಾರಿಯ ಯುವ ಸಂಭ್ರಮದಲ್ಲಿ ಕಿರು ನಾಟಕ, ಮೈಮ್ ಇತ್ಯಾದಿಗಳಿಗೆ ಅವಕಾಶ ನೀಡಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಮಾನವ ನಿರ್ಮಿತ ಆಪತ್ತುಗಳು, ರಾಷ್ಟ್ರೀಯ ಭಾವೈಕ್ಯತೆ ಮತ್ತು ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ಭಾರತದ ಸ್ವಾತಂತ್ರ್ಯ ಚಳವಳಿ, ಸಂಚಾರ ನಿಯಮಗಳ ಪಾಲನೆ ಇತ್ಯಾದಿ ವಿಷಯಗಳ ಆಧಾರಿತ ಪ್ರದರ್ಶನ ನೀಡಲು ಕಾಲೇಜುಗಳಿಗೆ ತಿಳಿಸಲಾಗಿದೆ ಎಂದರು.
ದೂರದ ಊರುಗಳಿಂದ ಬರುವ ಕಾಲೇಜು ತಂಡಗಳಿಗೆ ಮೈಸೂರು ರೈಲು ಹಾಗೂ ಬಸ್ ನಿಲ್ದಾಣದಿಂದ ವಾಹನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.