ಬೆಂಗಳೂರಿನಲ್ಲಿ ಯಾವ ಭಾಷೆಯ ಚಿತ್ರವಾಗಲೀ ಸಕ್ಸಸ್ ಆದರೆ, ಅದು ಇಡೀ ಭಾರತದಾದ್ಯಂತ ಸಕ್ಸಸ್ ಆಗುತ್ತದೆ ಎಂಬ ಮಾತಿದೆ. ಅದಕ್ಕಾಗಿ ತಮಿಳು, ತೆಲುಗು, ಬಾಲಿವುಡ್ ಸೇರಿದಂತೆ ಬಹುತೇಕ ಚಿತ್ರ ನಿರ್ಮಾಪಕರು ಬೆಂಗಳೂರಿಗೆ ಬಂದು ತಮ್ಮ ಚಿತ್ರಗಳ ಪ್ರಮೋಷನ್ ಮಾಡಿ ಹೋಗುತ್ತಾರೆ.
ಅದೇ ರೀತಿ, ನಮ್ಮ ಕರ್ನಾಟಕದ ಪ್ರಾದೇಶಿಕ ಭಾಷೆ ತುಳು ಚಿತ್ರ 'ಗಿರಿಗಿಟ್' ಕಳೆದ ವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಇದೇ ಖುಷಿಯಲ್ಲಿ 'ಗಿರಿಗಿಟ್' ಚಿತ್ರತಂಡ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಹಾಜರಾಗಿದ್ದರು. ಈಗಾಗಲೇ ತುಳುವಿನಲ್ಲಿ ಸುಮಾರು 109 ಚಿತ್ರಗಳು ಬಂದಿದ್ದು, ಕೆಲವೊಂದು ಚಿತ್ರಗಳು ಮಾತ್ರ ಬೆಂಗಳೂರಿನಲ್ಲಿ ಬಿಡುಗಡೆಯಾಗಿವೆ. ಆದರೆ, 'ಗಿರಿಗಿಟ್' ಚಿತ್ರಕ್ಕೆ ಸಿಕ್ಕಿದಂತೆ ದೊಡ್ಡ ಹೆಸರು ಉಳಿದ ತುಳು ಚಿತ್ರಗಳಿಗೆ ಸಿಕ್ಕಿರಲಿಲ್ಲ. ದಕ್ಷಿಣ ಕನ್ನಡದಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದ ಈ ಚಿತ್ರವನ್ನು ಚಿತ್ರತಂಡ ಸ್ವಲ್ಪ ರಿಸ್ಕ್ ತೆಗೆದುಕೊಂಡು ಧೈರ್ಯ ಮಾಡಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತ್ತು. ಆದರೆ, ನಿರೀಕ್ಷೆಯನ್ನೂ ಮೀರಿದ ಯಶಸ್ಸು ಚಿತ್ರತಂಡಕ್ಕೆ ಸಿಕ್ಕಿದ್ದು ಚಿತ್ರತಂಡ ಫುಲ್ ಖುಷ್ ಆಗಿದೆ. ಈಗಾಗಲೇ ಸುಮಾರು 25ಕ್ಕೂ ಹೆಚ್ಚು ಶೋಗಳ ಯಶಸ್ವಿ ಪ್ರದರ್ಶನ ಕಂಡಿರುವ ಚಿತ್ರ ಎರಡೇ ವಾರಕ್ಕೆ ಎರಡು ಕೋಟಿ ಬಾಚಿಕೊಂಡಿದೆ. ಇನ್ನು ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಇಂದು ಸುದ್ದಿಗೋಷ್ಠಿ ಏರ್ಪಡಿಸಿತ್ತು.
ಮಂಗಳೂರಿನವರೇ ಆದ ನಟ ನಿರ್ದೇಶಕ ರಿಷಭ್ ಶೆಟ್ಟಿ ಕೂಡಾ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು 'ಗಿರಿಗಿಟ್' ಚಿತ್ರವು ಪಕ್ಕಾ ಸೌತ್ ಕೆನರಾ ಸ್ಟೈಲ್ ಸಿನಿಮಾವಾಗಿದ್ದು, ಬೆಂಗಳೂರಿಗರು ಕೂಡಾ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ರೇಡಿಯೋ ಜಾಕಿ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ರಾಕೇಶ್ ಕದ್ರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಂಗಳೂರಿನ ಯುವತಿ ಶಿಲ್ಪಾಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಮೂರನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ದುಬೈ, ಆಸ್ಟ್ರೇಲಿಯಾ, ಅಮೆರಿಕದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಒಟ್ಟಿನಲ್ಲಿ ಮೊದಲಬಾರಿಗೆ ತುಳು ಚಿತ್ರವೊಂದು ಸಾಗರದಾಚೆಗೂ ಹೋಗಿ ಸದ್ದು ಮಾಡಲು ರೆಡಿಯಾಗಿದ್ದು ಇದರಿಂದ ತುಳು ಚಿತ್ರರಂಗ ಫುಲ್ ಖುಷಿಯಲ್ಲಿದೆ.