ಈಗಾಗಲೇ ಚೀನಾ, ಕೊರಿಯಾ, ಜಪಾನ್ ದೇಶಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ‘ಗಂಟುಮೂಟೆ’ ಕನ್ನಡ ಸಿನಿಮಾವನ್ನು ದಕ್ಷಿಣ ಏಷ್ಯಾದ ಚಲನಚಿತ್ರೋತ್ಸವ ‘ತಸ್ವೀರ್ ಸೌತ್ ಏಷ್ಯನ್ ಫಿಲ್ಮ್ ಫೆಸ್ಟಿವಲ್’ ಸಂಸ್ಥೆ ಪ್ರದರ್ಶನ ಮಾಡುತ್ತಿದೆ. ಇದೇ ಸಂಭ್ರಮದಲ್ಲಿರುವ ಚಿತ್ರ ತಂಡ ‘ಗಂಟುಮೂಟೆ’ ಚಿತ್ರವನ್ನೂ ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
'ಗಂಟುಮೂಟೆ' ಚಿತ್ರವು ಈ ವರ್ಷದ ಮೇ ತಿಂಗಳಿನಲ್ಲಿ ನ್ಯೂಯಾರ್ಕ್ನ, ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮೊದಲ ಪ್ರದರ್ಶನ ಕಂಡು 'ಅತ್ಯುತ್ತಮ ಸ್ಕ್ರೀನ್ ಪ್ಲೇ' ಪ್ರಶಸ್ತಿ ಪಡೆದಿದೆ. ಕೆನಡಾದಲ್ಲಿನ ಒಟ್ಟಾವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ಆಯ್ಕೆ ಸ್ಪರ್ಧೆಯಲ್ಲಿದ್ದ ಈ ಚಿತ್ರವು ಇಟಲಿ, ಆಸ್ಟ್ರೇಲಿಯಾಗಳಲ್ಲಿನ ಪ್ರತಿಷ್ಠಿತ ಚಲಚಿತ್ರೋತ್ಸವಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಪ್ರೇಕ್ಷಕರ ಮನಗೆದ್ದಿದೆ. ಕನ್ನಡಿಗರಿಗೆ ಈ ವರ್ಷದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಸಿನಿಮಾ ಇದಾಗಿದೆ ಎಂದರೆ ತಪ್ಪಾಗಲಾರದು.
90ರ ದಶಕದಲ್ಲಿ, ಹೈಸ್ಕೂಲ್ ಜೀವನದ ಸುತ್ತ ನಡೆಯುವ ಈ ಕಥೆ, ಹುಡುಗಿಯ ದೃಷ್ಟಿಕೋನದಲ್ಲಿನ ಭಾವನೆಗಳ ತೊಳಲಾಟವನ್ನು ಅತ್ಯಂತ ನೈಜವಾಗಿ, ಎಲ್ಲರಿಗೂ ಇದು ನಮ್ಮದೇ ಕತೆ ಎನ್ನುವ ಹಾಗೆ ಚಿತ್ರಿಸಲಾಗಿದೆ. ಈ ಚಿತ್ರವನ್ನು ರೂಪ ರಾವ್ ನಿರ್ದೇಶಿಸಿದ್ದು, ಅಮೇಯುಕ್ತಿ ಸ್ಟುಡಿಯೋಸ್ ನಿರ್ಮಿಸಿದೆ. ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ಮತ್ತು ನಿಶ್ಚಿತ್ ಕೊರೋಡಿ ಪ್ರಮುಖ ಪಾತ್ರದಲ್ಲಿದ್ದಾರೆ.