'ಗಾಳಿಪಟ' ಸಿನಿಮಾ ಹುಡುಗಿ ನೀತು ಇದೀಗ 'ವಜ್ರಮುಖಿ' ಎಂಬ ಹಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಸಿನಿಮಾದ ಆಡಿಯೋ ಬಿಡುಗಡೆ ಇಂದು ಜರುಗಿತು.
ಇದೇ ಮೊದಲ ಬಾರಿಗೆ ನೀತು ಹಾರರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇನ್ನು 'ರೋಡ್ ರೋಮಿಯೋ' ಚಿತ್ರದ ನಂತರ ದಿಲೀಪ್ ಪೈ ಕೂಡಾ ವಜ್ರಮುಖಿ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಚಿತ್ರದ ಮತ್ತೊಬ್ಬ ನಾಯಕಿ ಸಂಜನಾ ಶೆಟ್ಟಿ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಲಾಗಿದೆ.

ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ಲಹರಿ ವೇಲು ಆಡಿಯೋ ಬಿಡುಗಡೆ ಮಾಡಿದರು. 'ಡೇಸ್ ಆಫ್ ಬೋರಾಪುರ' ಚಿತ್ರವನ್ನು ನಿರ್ದೇಶಿಸಿದ್ದ ಆದಿತ್ಯ ಕೃಷ್ಣಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಡಾ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಹಾಡುಗಳಿಗೆ ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ. ಈ ಹಿಂದೆ ಶ್ರೀ ಸಿಗಂದೂರು ಚೌಡೇಶ್ವರಿ ಎಂಬ ಸಿನಿಮಾ ನಿರ್ಮಿಸಿದ್ದ ಶಶಿಕುಮಾರ್ 'ವಜ್ರಮುಖಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.