ಬರೋಬ್ಬರಿ 200 ದಿನಗಳ ಬಳಿಕ ತೆರೆಯಲಿವೆ ಚಿತ್ರಮಂದಿರ - Film Screening After 200 days
ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅಸ್ತು ಎಂದಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಿಂದ ಚಿತ್ರಮಂದಿರಗಳು ತೆರೆಯಲಿದೆ.
ಮಾರ್ಚ್ 14ರಿಂದ ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಂಡಿತ್ತು. ಕಾರಣ ಕೊರೊನಾ ಪ್ರಚೋದಿತ ಲಾಕ್ಡೌನ್. ಆದರೆ ಇದೀಗ ಸಿನಿಪ್ರಿಯರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಅಕ್ಟೋಬರ್ 2ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಬರೋಬ್ಬರಿ 200 ದಿನಗಳ ಬಳಿಕ ಚಿತ್ರ ಪ್ರದರ್ಶನವಾಗಲಿದೆ.
200 ದಿವಸಗಳ ಕಾಲ ಚಿತ್ರ ಪ್ರದರ್ಶನ ಸ್ಥಗಿತಗೊಂಡಿದ್ದು, ಇದರಿಂದ ಚಿತ್ರರಂಗದ ಚಟುವಟಿಕೆಗಳು ಸಹ ಬಂದ್ ಆಗಿದ್ದವು. ಹೀಗಾಗಿ ಕರ್ನಾಟಕದಲ್ಲಿ ಸುಮಾರು 1,000 ಕೋಟಿಗೂ ಹೆಚ್ಚು ವಹಿವಾಟು ಸ್ಥಗಿತ ಆಗಿದ್ದವು. ಇದರಲ್ಲಿ ಚಿತ್ರರಂಗದಿಂದಲೇ ಹೆಚ್ಚಿನ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಡಾ. ರಾಜಕುಮಾರ್ ಅವರನ್ನು ಅಪಹರಣ ಮಾಡಿದ್ದ ಸಂದರ್ಭದಲ್ಲಿ 108 ದಿನಗಳ ಕಾಲ (ಜುಲೈ 30, 2000ರ ಮಧ್ಯರಾತ್ರಿಯಿಂದ ಅಕ್ಟೋಬರ್ 15ರ ತನಕ) ಕನ್ನಡ ಚಿತ್ರರಂಗದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆದರೆ ಇದೀಗ ಕೊರೊನಾದಿಂದ 200 ದಿನಗಳ ಕಾಲ ಚಿತ್ರಮಂದಿರಗಳು ಕಾರ್ಯ ನಿರ್ವಹಣೆ ಮಾಡುತ್ತಿರಲಿಲ್ಲ.
ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೆಗಲ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಂಡಳಿಯ ಅಧ್ಯಕ್ಷ ಜೈರಾಜ್ ಅವರು ಮಾರ್ಚ್ ಮಧ್ಯ ಭಾಗದಲ್ಲಿ ಬಿಡುಗಡೆಯಾಗಿ ಅರ್ಧಕ್ಕೆ ಸ್ಥಗಿತಗೊಂಡ ಸಿನಿಮಾಗಳನ್ನು ಮರುಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಮಾರ್ಚ್ 12 ಗುರುವಾರದಂದು ನರಗುಂದ ಬಂಡಾಯ, ಶಿವಾರ್ಜುನ ಮತ್ತು ಮಾರ್ಚ್ 13 ಶುಕ್ರವಾರದಂದು, 5 ಅಡಿ 7 ಅಂಗುಲ, ಅಂಬಾನಿ ಪುತ್ರ, ನಮ್ ಕಥೆ ನಿಮ್ ಜೊತೆ ಮತ್ತು ಹುಲಿದುರ್ಗ ಬಿಡುಗಡೆಯಾಗಿದ್ದವು. ಈ ಸಿನಿಮಾಗಳನ್ನು ಸದ್ಯ ಮರು ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ.