ನಡೆದಾಡುವ ದೇವರು ಎಂದು ಕರೆಯಿಸಿಕೊಂಡಿದ್ದ ಮಹಾನ್ ಸಂತ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸ ಹಾಗು ಅನ್ನ ದಾಸೋಹ ಮಾಡಿ ಜಗತ್ತಿನಾದ್ಯಂತ ಹೆಸರಾಗಿದ್ದಾರೆ. ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಜೀವನ ಚರಿತ್ರೆಯನ್ನ ಮಿನಿ ಸಿನಿ ಸೀರಿಸ್ ಮಾಡಲಾಗುತ್ತಿದೆ. ಇದನ್ನು ನಾದಬ್ರಹ್ಮ ಹಂಸಲೇಖ ನಿರ್ದೇಶನ ಮಾಡುವ ಹೊಣೆ ಹೊತ್ತಿದ್ದಾರೆ.
ಸಿದ್ದಗಂಗಾ ಶ್ರೀಗಳು ಮಾಡಿದ ಸಾಮಾಜಿಕ ಕೆಲಸಗಳನ್ನು ಮಿನಿ ಸಿನಿ ಸೀರಿಸ್ ಒಳಗೊಂಡಿದೆ. ಈ ಮಿನಿ ಸಿನಿ ಸೀರಿಸ್ಗೆ ಬಸವ ಭಾರತ ಅಂತಾ ಹೆಸರಿಡಲಾಗಿದೆ. ಈ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಖಾಸಗಿ ಹೋಟೆಲ್ನಲ್ಲಿ ಮಾಡಲಾಯಿತು. ಮಾಜಿ ಐಎಎಸ್ ಅಧಿಕಾರಿ ಡಾ. ಸೋಮಶೇಖರ್, ಎಂ.ಪಿ ರೇಣುಕಾಚಾರ್ಯ, ನಿರ್ಮಾಪಕ ಎಮ್.ರುದ್ರೇಶ್, ದೀಪಕ್, ಸದಾ ಶಿವಯ್ಯ ಉಪಸ್ಥಿತರಿದ್ದರು.
ಒಂದು ಅಚ್ಚರಿ ಸಂಗತಿ ಅಂದ್ರೆ ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ನಟಿಸಬೇಕು ಎಂಬುದು ಚಿತ್ರತಂಡದ ಆಶಯವಾಗಿದೆ. ಈಗಾಗಲೇ ಅಮಿತಾಭ್ ಬಚ್ಚನ್ ಅವರನ್ನ ಸಿದ್ದಗಂಗಾ ಶ್ರೀಗಳ ಪಾತ್ರವನ್ನ ಮಾಡಲು ಸಂಪರ್ಕಿಸಲಾಗಿದೆ. ಬಿಗ್ ಬಿ ಕೂಡ ಕಥೆಯನ್ನು ಕೇಳಿದ್ದಾರೆ ಎನ್ನಲಾಗ್ತಿದೆ. ಸದ್ಯ ಅವರ ಆರೋಗ್ಯದಲ್ಲಿ ಏರುಪೇರಾಗಿರೋ ಕಾರಣ ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದೇವೆ ಎಂದು ಹಂಸಲೇಖ ಹೇಳಿದ್ದಾರೆ.
ಸಿದ್ದಗಂಗಾ ಶ್ರೀಗಳ 115 ಜಯಂತ್ಯುತ್ಸವದ ಪ್ರಯುಕ್ತ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸಿನಿ ಸೀರಿಸ್ ಇದಾಗಿದೆ. ನಾದಬ್ರಹ್ಮ ಹಂಸಲೇಖ ಅವರ ಸಾರಥ್ಯದಲ್ಲಿ ಒಟ್ಟು 52 ಎಪಿಸೋಡ್ಗಳನ್ನು ಒಳಗೊಂಡ ಮಿನಿ ಸಿರೀಸ್ಗಳನ್ನಾಗಿ ಮಾಡಲಾಗುತ್ತದಂತೆ. ದೊಡ್ಡ ಮೊತ್ತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಈ ಸೀರಿಸ್ ಸಿದ್ಧವಾಗುತ್ತಿದೆ.
ಏಳಕ್ಕೂ ಹೆಚ್ಚು ತಂಡಗಳಲ್ಲಿ 300 ಕ್ಕೂ ಅಧಿಕ ತಂತ್ರಜ್ಞರು ಈ ಮಿನಿ ಸೀರಿಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ರುದ್ರಾ ಕಿರುಚಿತ್ರ ಸಂಸ್ಥೆ ಹಾಗು ಐದನಿ ಎಂಟರ್ಟೈನ್ಮೆಂಟ್ ಸಂಸ್ಥೆ ಶಿವಕುಮಾರ ಸ್ವಾಮೀಜಿಗಳ ಜೀವನ ಚರಿತ್ರೆಯ ಚಿತ್ರ ನಿರ್ಮಾಣ ಮಾಡಲು ಮುಂದಾಗಿದೆ. ಈ ಹಿಂದೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅತಿಥಿ ಪಾತ್ರ ಮಾಡಿದ್ದರು. ಇದಾದ ಬಳಿಕ ಅವರು ಕನ್ನಡಕ್ಕೆ ಮರಳಿಲ್ಲ. ಇದೀಗ ಶಿವಕುಮಾರ ಸ್ವಾಮೀಜಿ ಪಾತ್ರ ಮಾಡುವ ಮೂಲಕ ಕನ್ನಡಕ್ಕೆ ಬರಲಿದ್ದಾರೆ ಎನ್ನಲಾಗ್ತಿದೆ.
ಸಿನಿ ಸಿರೀಸ್ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಆ ಕಾರ್ಯಕ್ರಮದಲ್ಲಿ 115 ಜನ ಗಾಯಕರು ಹಂಸಲೇಖ ಅವರ ಸಾರಥ್ಯದಲ್ಲಿ 6 ಹಾಡುಗಳನ್ನ ಹಾಡಲಿದ್ದಾರೆ. ಅಮಿತ್ ಶಾ ಜೊತೆಗೆ ರಾಜ್ಯದ ನಾಯಕರು ಇರಲಿದ್ದಾರೆ.