ಬೆಂಗಳೂರು: ಕಂಠೀರವ ಸ್ಟುಡಿಯೋ ಕನ್ನಡ ಚಿತ್ರರಂಗದ ಕೇಂದ್ರ ಬಿಂದು. ಬ್ಲಾಕ್ ಅಂಡ್ ವೈಟ್ ಹಾಗೂ ರಾಜ್ ಕುಮಾರ್ ಕಾಲದಿಂದಲೂ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಬಹಳ ಹತ್ತಿರವಾದ ಜಾಗ ಅಂದ್ರೆ ಅದು ಕಂಠೀರವ ಸ್ಟುಡಿಯೋ.
1966ರಲ್ಲಿ ಅಂದಿನ ರಾಜ್ಯ ಸರ್ಕಾರ 20 ಎಕರೆ ಜಾಗವನ್ನು ಸಿನಿಮಾ ಶೂಟಿಂಗ್ಗೆ ಮೀಸಲಿಟ್ಟಿತು. ಕಂಠೀರವ ಸ್ಟುಡಿಯೋ ಸ್ಥಾಪನೆಗೊಂಡು ಬರೋಬ್ಬರಿ 56 ವರ್ಷಗಳು ಕಳೆಯುತ್ತಿದೆ. ಆದರೆ, ಒಂದು ಸಿನಿಮಾ ಚಿತ್ರೀಕರಣಕ್ಕೆ ಬೇಕಾಗುವ ದೊಡ್ಡ ಮಟ್ಟದ ಸ್ಟ್ರೀಟ್, ಐಶಾರಾಮಿಯಾಗಿ ಕೂಡಿರುವ ಏರ್ ಪೋರ್ಟ್, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿನಿಮಾ ಶೂಟಿಂಗ್ ಪ್ಲೋರ್ಗಳು, ಉತ್ತಮ ಪೊಲೀಸ್ ಠಾಣೆಯ ಸೆಟ್ಗಳು ಕಂಠೀರವ ಸ್ಟುಡಿಯೋದಲ್ಲಿ ಇಲ್ಲದ ಕಾರಣ ಸಾಕಷ್ಟು ಚಿತ್ರ ತಂಡಗಳು ಬೇರೆ ಬೇರೆ ರಾಜ್ಯದಲ್ಲಿರುವ ಅದ್ಧೂರಿ ಸ್ಟುಡಿಯೋಗಳಲ್ಲಿ ಚಿತ್ರೀಕರಣ ಮಾಡುತ್ತಿದೆ. ಇದು ಸಹಜವಾಗಿ ನಿರ್ಮಾಪಕರಿಗೆ ಹೊರೆಯಾಗುತ್ತಿದೆ.
ಸದ್ಯ ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಂಠೀರವ ಸ್ಟುಡಿಯೋ ಅಭಿವೃದ್ಧಿ ಕಾಣಬೇಕಿದೆ. ಹೀಗಾಗಿ 2022ನೇ ಬಜೆಟ್ ಮೂಲಕ ಸರ್ಕಾರ ಕಂಠೀರವ ಸ್ಟುಡಿಯೋ ಅಭಿವೃದ್ಧಿಗೆ ಕೈ ಜೋಡಿಸುತ್ತಾ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಮಾತನಾಡಿರೋ ನಿರ್ಮಾಪಕ ಹಾಗೂ ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್, ಕಂಠೀರವ ಸ್ಟುಡಿಯೋ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ.
ಇದೀಗ ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಹಾಗು ಪ್ಯಾನ್ ಇಂಡಿಯಾ ಸಿನಿಮಾಗಳು ನಿರ್ಮಾಣ ಆಗುತ್ತಿದೆ. ಈ ದೃಷ್ಟಿಯಿಂದ ಕಂಠೀರವ ಸ್ಟುಡಿಯೋದಲ್ಲಿ ಎಸಿ ಹವಾನಿಯಂತ್ರಿತ ಶೂಟಿಂಗ್ ಪ್ಲೋರ್ಗಳನ್ನು ನಿರ್ಮಾಣ ಮಾಡಬೇಕು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸೆಟ್ಗಳನ್ನು ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ to ಬೆಂಗಳೂರು : ಕುಟುಂಬ ಸಮೇತ 500 KM ಪಾದಯಾತ್ರೆ ಹೊರಟ ಅಪ್ಪು ಅಭಿಮಾನಿ
ಕನ್ನಡ ಚಿತ್ರರಂಗದಿಂದ ರಾಜ್ಯ ಸರ್ಕಾರಕ್ಕೆ ಕೋಟಿಗಟ್ಟಲೆ ಆದಾಯ ಇದೆ. ಈ ದೃಷ್ಟಿಯಿಂದ ಆದರೂ ಈ ವರ್ಷದ ಬಜೆಟ್ನಲ್ಲಿ ಕಂಠೀರವ ಸ್ಟುಡಿಯೋವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು. ಇದರಿಂದ ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣ ಮಾಡುವವರಿಗೆ ಅನುಕೂಲ ಆಗಲಿದೆ.