ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಂಬಂಧ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ, ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದಾರೆ.ಇನ್ನು ಈ ಬಂದ್ಗೆ ಕನ್ನಡ ಚಿತ್ರರಂಗದ ಬೆಂಬಲ ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳಿದ್ದಾರೆ.
ಕನ್ನಡ ಚಿತ್ರರಂಗ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಹಳ ಹಿಂದಿನಿಂದಲೂ ಕನ್ನಡ ನೆಲ, ಜಲ, ಭಾಷೆ ವಿಚಾರದಲ್ಲಿ ಬೆಂಬಲ ನೀಡುತ್ತಾ ಬಂದಿದೆ. ಆದರೆ ನಾಳೆ ನಡೆಯುತ್ತಿರುವ ಬಂದ್ಗೆ ಚಿತ್ರರಂಗದ ಬೆಂಬಲ ಇಲ್ಲ. ನಾಳಿನ ಬಂದ್ಗೆ ನೈತಿಕವಾಗಿ ಬೆಂಬಲ ಕೊಡಬಹುದು ಅಷ್ಟೆ. ಚಿತ್ರರಂಗದಲ್ಲಿ ಸಾಕಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಬಂದ್ನಿಂದ ಕೆಲಸ ನಿಲ್ಲಿಸಿದರೆ ಅವರಿಗೆಲ್ಲಾ ಸಮಸ್ಯೆ ಆಗುತ್ತದೆ.ಅಲ್ಲದೆ ನಿರ್ಮಾಪಕರಿಗೂ ನಷ್ಟವಾಗುತ್ತದೆ. ಬಂದ್ಗೆ ಬೆಂಬಲ ನೀಡುವುದು ನನ್ನೊಬ್ಬನ ಅಭಿಪ್ರಾಯ ಅಲ್ಲ. ನಮ್ಮ ಎಲ್ಲಾ ಸದಸ್ಯರು ಕುಳಿತು ಚರ್ಚಿಸಿ ತೀರ್ಮಾನಿಸಬೇಕು.
ಕಳೆದ ವಾರ 10 ಸಿನಿಮಾಗಳು ಬಿಡುಗಡೆಯಾಗಿವೆ. ಒಂದು ದಿನ ಪ್ರದರ್ಶನ ನಿಂತರೆ ಲಕ್ಷಾಂತರ ರೂಪಾಯಿ ನಷ್ಟ ಆಗುತ್ತದೆ. ಆದ್ದರಿಂದ ಬಂದ್ಗೆ ಚಿತ್ರರಂಗ ಬಾಹ್ಯ ಬೆಂಬಲ ನೀಡಲಿದೆಯೇ ಹೊರತು ಬಂದ್ ಬೆಂಬಲಿಸುವ ಬಗ್ಗೆ ನಿರ್ಧಾರ ಮಾಡಿಲ್ಲ. ಬಂದ್ಗೆ ಬೆಂಬಲ ನೀಡುವಂತೆ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದಾರೆ. ಆದರೆ ಸಮಸ್ಯೆ ಬಗ್ಗೆ ಅವರಿಗೆ ನಾನು ವಿವರಿಸಿ ಹೇಳಿದ್ದೇನೆ. ಬಂದ್ಗೆ ಬೆಂಬಲಿಸಬೇಕು ಅಂದರೆ ನಾವು ಸಾಕಷ್ಟು ಸಿದ್ಧತೆ ಮಾಡಿಕೊಳ್ಳ ಬೇಕು. ಅಲ್ಲದೆ ನಮ್ಮ ನಟ-ನಟಿಯರು ಆಗಮಿಸುವುದರಿಂದ ಅವರ ರಕ್ಷಣೆಗಾಗಿ ಪೊಲೀಸ್ ಇಲಾಖೆಗೂ ಮನವಿ ನೀಡಬೇಕು. ಆದ್ದರಿಂದ ನಾವು ಏಕಾಏಕಿ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹೇಳಿದ್ದಾರೆ.