ಸಿನಿಮಾದಲ್ಲಿ ಹೆಸರು ಮಾಡುವುದು ಸುಲಭದ ಮಾತಲ್ಲ. ನೀವು ನಟನಾಗಲೋ, ನಿರ್ದೇಶಕನಾಗಲೋ ಪ್ರಯತ್ನಿಸಿದರೆ ಶ್ರಮದ ಜೊತೆಗೆ ನಿಮ್ಮೊಂದಿಗೆ ಅದೃಷ್ಟ ಇರಬೇಕು. ಒಂದು ವೇಳೆ ನೀವೇ ಕಥೆ ರೆಡಿ ಮಾಡಿದಲ್ಲಿ ಆ ಸಿನಿಮಾಗೆ ಹಣ ಹೂಡಲು ನಿರ್ಮಾಪಕ ಬೇಕೇ ಬೇಕು.
ಆದರೆ, ಸ್ಯಾಂಡಲ್ವುಡ್ನಲ್ಲಿ ನವ ನಟರಿಗೆ, ನಿರ್ದೇಶಕರಿಗೆ ಅಷ್ಟು ಸುಲಭವಾಗಿ ನಿರ್ಮಾಪಕ ಸಿಗುವುದಿಲ್ಲ. ಕೆಲವೊಮ್ಮೆ ನಿರ್ಮಾಪಕರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಲು ತಾವೇ ಬಂಡವಾಳ ಹೂಡಿ ನಿರ್ದೇಶಕನನ್ನು ಹುಡುಕಿ ಸಿನಿಮಾ ಮಾಡುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ 'ಖನನ' ಸಿನಿಮಾ. ಪುತ್ರ ವ್ಯಾಮೋಹದಿಂದ ಆರ್ಯವರ್ಧನನ್ನು ನಾಯಕನನ್ನಾಗಿ ಪರಿಚಯಿಸಲು ತಂದೆ ಶ್ರೀನಿವಾಸ್ ನಾಲ್ಕು ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಆದರೆ, ಇದೀಗ ಪುತ್ರಿ ಮೇಲಿನ ವ್ಯಾಮೋಹದಿಂದ ವಸಂತ್ ರಾಜ್ ಎನ್ನುವವರು ಸಿನಿಮಾ ಮಾಡಲು ಹೊರಟಿದ್ದಾರೆ. ಅಂದಹಾಗೆ ವಸಂತ್ ರಾಜ್ ತಮ್ಮ ಪುತ್ರಿ ಅಮೃತಾಗಾಗಿ ಹಣ ಹೂಡಿ 'ನವ ಇತಿಹಾಸ' ಎಂಬ ಸಿನಿಮಾ ನಿರ್ಮಿಸುತ್ತಿದ್ದಾರೆ.
ವಸಂತ್ ರಾಜ್ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಜ್ಯೂನಿಯರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಮೃತ ಈಗಾಗಲೇ ಎರಡು ಲಂಬಾಣಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಹುಡ್ಗೀರೇ ಸಿಕ್ತಿಲ್ಲ' ಎಂಬ ಟ್ಯಾಗ್ಲೈನ್ ಹೊಂದಿರುವ 'ನವ ಇತಿಹಾಸ' ಚಿತ್ರಕ್ಕೆ ಭ್ರೂಣ ಹತ್ಯೆಯೇ ಕಥಾವಸ್ತು. ಸಮರ್ಥ ಹಾಗೂ ಶ್ರೀ ರಜನಿ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಲಿದ್ದಾರೆ.