ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಕೆಜಿಎಫ್ 2 ಚಿತ್ರೀಕರಣ ಮೊನ್ನೆಯಿಂದ ಆರಂಭಗೊಂಡಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭವಾಗಿದ್ದು ಚಾಪ್ಟರ್ 2 ರಲ್ಲಿ ಆನಂದ್ ಇಂಗಳಗಿ ಪಾತ್ರವನ್ನು ಪ್ರಕಾಶ್ ರೈ ಮಾಡುತ್ತಿದ್ದಾರೆ.
ಕೆಲವು ದಿನಗಳ ಮುನ್ನವೇ ಅನಂತ್ ನಾಗ್ ನಾನು ಚಾಪ್ಟರ್ 2 ರಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದರು. ಆದರೂ ಕೂಡಾ ಆ ಜಾಗಕ್ಕೆ ಪ್ರಕಾಶ್ ರೈ ಬಂದಿರುವುದು ಅನಂತ್ ನಾಗ್ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ. ಪ್ರಕಾಶ್ ರೈ ಕೆಜಿಎಫ್ ತಂಡ ಸೇರಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಪ್ರಕಾಶ್ ರೈ ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ನಿಜ. ಆದರೆ ಅನಂತ್ನಾಗ್ ಪಾತ್ರಕ್ಕೆ ಅವರನ್ನು ಕರೆತಂದಿರುವುದು ಸರಿಯಲ್ಲ ಎಂಬುದು ಅಭಿಮಾನಿಗಳ ವಾದವಾಗಿದೆ.
ಇದರೊಂದಿಗೆ ಕೆಜಿಎಫ್ ಭಾಗ 2 ರಲ್ಲಿ ಅಧೀರನ ಪಾತ್ರ ಮಾಡುತ್ತಿದ್ದ ಬಾಲಿವುಡ್ ನಟ ಸಂಜಯ್ ದತ್, ಕ್ಯಾನ್ಸರ್ನಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಇದೀಗ ಚಿತ್ರೀಕರಣದ ಕಥೆ ಎನು ಎಂಬುದರ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ ಸಂಜಯ್ ದತ್ ಪಾತ್ರದ ಚಿತ್ರೀಕರಣ ಬಹುತೇಕ ಮುಗಿದಿತ್ತು. ಒಂದು ದಿನದ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಒಂದು ವೇಳೆ ಅದು ನಡೆಯದಿದ್ದರೂ ಸಿನಿಮಾಗೆ ಏನೂ ತೊಂದರೆ ಆಗುವುದಿಲ್ಲ ಎಂಬ ಮಾತು ಕೇಳಿಬಂದಿದೆ.
ಒಟ್ಟಿನಲ್ಲಿ ಇದೀಗ ಸಿನಿಮಾಗೆ ಸಂಬಂಧಿಸಿದಂತೆ ಗೊಂದಲಗಳು ಉಂಟಾಗಿದ್ದು ಇವೆಲ್ಲವನ್ನೂ ನಿರ್ದೇಶಕ ಪ್ರಶಾಂತ್ ನೀಲ್ ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.