ರಕ್ಷಿತ್ ಶೆಟ್ಟಿ ಸದ್ಯಕ್ಕೆ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಬ್ಯುಸಿ. ಈ ಸಿನಿಮಾ ಪಂಚಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಚಿತ್ರದ ತೆಲುಗು ಅವತರಣಿಕೆಗೆ ಖ್ಯಾತ ಸಾಹಿತಿ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆಯುತ್ತಿದ್ದಾರೆ.
ರಾಮಜೋಗಯ್ಯ ಶಾಸ್ತ್ರಿ, ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಚಿತ್ರ ಸಾಹಿತ್ಯಕ್ಕೆ ಇವರು ಬಹಳ ಜನಪ್ರಿಯ. ತೆಲುಗಿನ ಯಾವುದೇ ಸ್ಟಾರ್ ಸಿನಿಮಾ ಬರಲಿ ಅದರಲ್ಲಿ ಶಾಸ್ತ್ರಿಯವರ ಸಾಹಿತ್ಯದ ಸೊಬಗು ಮೇಳೈಸಿರುತ್ತದೆ. ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯವಿದೆ ಅಂದ್ರೆ ಆ ಹಾಡು ಸೂಪರ್ ಹಿಟ್ ಅಂತಾನೇ ಅರ್ಥ. ಅಂತಹ ಚಾರ್ಮ್ ಇರುವ ರಾಮಜೋಗಯ್ಯ ಶಾಸ್ತ್ರಿ ಅವರು ಕನ್ನಡದ ಹೆಮ್ಮೆಯ ಚಿತ್ರಗಳಾದ ದೊಡ್ಡ ಬಜೆಟ್ನ ಕೆಜಿಎಫ್, ಪೈಲ್ವಾನ್ ಚಿತ್ರಗಳ ತೆಲುಗು ಅವತರಣಿಕೆಯ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ಕನ್ನಡದಲ್ಲಿ ಜನಪ್ರಿಯವಾದಂತೆ ತೆಲುಗಿನ ಈ ಚಿತ್ರದ ಹಾಡುಗಳು ಕೂಡಾ ಜನಪ್ರಿಯವಾಗಿದ್ದವು. ಇದೀಗ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ ' ಸಿನಿಮಾ ಕೂಡಾ ಪಂಚಭಾಷೆಯಲ್ಲಿ ಸಿದ್ದವಾಗುತ್ತಿದ್ದು ಈ ಚಿತ್ರದ ತೆಲುಗು ವರ್ಷನ್ಗೆ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆಯುತ್ತಿದ್ದಾರೆ.
ಈ ಚಿತ್ರದ ಕಥಾವಸ್ತು ಹಾಗೂ ಮೇಕಿಂಗ್ ನೋಡಿ ಥ್ರಿಲ್ ಆಗಿರುವ ಅವರು, ಬಹಳ ಖುಷಿಯಿಂದ ಕೆಲಸ ಶುರು ಮಾಡಿದ್ದಾರಂತೆ. ಈ ಕುರಿತು ಸ್ವತಃ ಶಾಸ್ತ್ರಿಗಳು ತಮ್ಮ ಟ್ವಿಟ್ಟರ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ. ಡಿಸೆಂಬರ್ಗೆ ಅವನೇ ಶ್ರೀಮನ್ನಾರಾಯಣ ನಿಮ್ಮ ಮುಂದೆ ಬರುತ್ತಿದ್ದಾನೆ. ಈ ಕುರಿತು ಚಿತ್ರ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಿಂಟ್ ನೀಡಿದ್ದಾರೆ. ಸಚಿನ್ ರವಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ , ಬಾಲಾಜಿ ಮೋಹನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಜನೀಶ್ ಲೋಕನಾಥ್ ಹಾಗೂ ಚರಣ್ ರಾಜ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.