ನಟ ದುನಿಯಾ ವಿಜಯ್ ತಮ್ಮ ಹುಟ್ಟೂರಾದ ಕುಂಬಾರಹಳ್ಳಿಯಲ್ಲಿ ತಾಯಿ ಮತ್ತು ತಂದೆಗೆ ದೇವಾಲಯ ಕಟ್ಟಿಸಿ ಆ ಜಾಗಕ್ಕೆ 'ದುನಿಯಾ ರುಣ' ಎಂದು ನಾಮಕರಣ ಮಾಡಿದ್ದಾರೆ. ಈ ಮೂಲಕ 'ಸಲಗ' ಚಿತ್ರದ ಗೆಲುವನ್ನು ತಂದೆ-ತಾಯಿಗೆ ಸಮರ್ಪಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ತಾಯಿಗೆ ಕೊರೊನಾ ಸೋಂಕು ತಗುಲಿದಾಗ ಅವರೇ ಮುಂದೆ ನಿಂತು ಆರೈಕೆ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದರು.
ಕನ್ನಡ ಚಿತ್ರದಂಗದಲ್ಲಿ ಇತ್ತೀಚೆಗೆ ತೆರೆ ಕಂಡ 'ಸಲಗ' ಸಿನಿಮಾದ ಗೆಲುವನ್ನ ತಂದೆ-ತಾಯಿ ಹಾಗೂ ಅವರ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. ಜೊತೆಗೆ ಆನೇಕಲ್ ತಾಲೂಕಿನ ಕುಂಬಾರನಹಳ್ಳಿಯಲ್ಲಿ ಅಪ್ಪ-ಅಮ್ಮನ ಸಮಾಧಿ ಇರುವ ಸ್ಥಳಕ್ಕೆ ಪತ್ನಿ ಕೀರ್ತಿ ಹಾಗೂ ಸಾಕಷ್ಟು ಅಭಿಮಾನಿಗಳ ಜೊತೆ ತೆರಳಿ 'ಸಲಗ' ಗೆಲುವನ್ನು ಸಂಭ್ರಮಿಸಿದ್ದಾರೆ. 'ಸಲಗ' ಸಕ್ಸಸ್ ಆಚರಣೆಗೆ ರಾಜ್ಯದ ವಿವಿಧ ಊರುಗಳಿಂದ ಬಂದ ಅಭಿಮಾನಿಗಳಿಗೆ ಊಟ ಬಡಿಸಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ತಂದೆ-ತಾಯಿ ಸಮಾಧಿ ಜಾಗಕ್ಕೆ 'ದುನಿಯಾ ರುಣ' ಎಂದು ನಾಮಕರಣ ಮಾಡಿದ್ದಾರೆ. ರು ಎಂದರೆ ರುದ್ರಪ್ಪ, ಣ ಎಂದರೆ ನಾರಾಯಣಮ್ಮ, ಅಪ್ಪ- ಅಮ್ಮನ ಹೆಸರಿನ ಮೊದಲ ಮತ್ತು ಕೊನೆಯ ಅಕ್ಷರವನ್ನ ಸೇರಿಸಿ 'ದುನಿಯಾ ರುಣ' ಎಂದು ಹೆಸರಿಟ್ಟಿದ್ದಾರೆ.
ಇನ್ನು 'ಸಲಗ' ಸಿನಿಮಾವನ್ನು ದುನಿಯಾ ವಿಜಯ್ ಅವರೇ ನಟಿಸಿ, ನಿರ್ದೇಶನ ಮಾಡಿದ್ದಾರೆ. ತಾಯಿ-ತಂದೆ ಮೇಲೆ ಈ ನಟನಿಗಿರುವ ಪ್ರೀತಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.