ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಆರೋಪಿಯಾಗಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ದಂಧೆಕೋರನನ್ನು ಸಿಸಿಬಿ ಪೊಲೀಸರು ಸದೆಬಡಿದಿದ್ದಾರೆ. ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ಭಟ್ಕಳ ಮೂಲದ ಮೆಸ್ಸಿ ಎಂಬಾತನನ್ನು ಬಂಧಿಸಿರುವ ಸಿಸಿಬಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ.
ನಗರದ ಹೋಟೆಲ್ಗಳಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ಸಮರ ಸಾರಿದ್ದರು. ಜೊತೆಗೆ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ನಟಿಯರು, ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಯ ಮಾಲೀಕರನ್ನು ಕಳೆದ ವರ್ಷ ಬಂಧಿಸಿದ್ದರು.
ನಟಿಯರನ್ನು ಬಳಸಿಕೊಂಡು ಡ್ರಗ್ಸ್, ಡ್ರಗ್ಸ್ ಪಾರ್ಟಿ ಸಂಘಟಿಸುತ್ತಿದ್ದ ಆರೋಪಿ ವಿರೇನ್ ಖನ್ನಾ ಸೇರಿ ಹದಿನಾರು ಮಂದಿ ಆರೋಪಿಗಳನ್ನು ಜೈಲಿಗಟ್ಟಿ ಸುಮಾರು 24 ಜನರ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪೈಕಿ ಮೋಸ್ಟ್ ವಾಂಟೆಡ್ ಡ್ರಗ್ಸ್ ಪೆಡ್ಲರ್ ಆಗಿದ್ದ ಮೆಸ್ಸಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇದೀಗ ಆತನನ್ನೂ ಸಿಸಿಬಿ ಲಾಕ್ ಮಾಡಿದೆ.
ಕಾಟನ್ ಪೇಟೆ ಹಾಗೂ ಬಾಣಸವಾಡಿಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೂ ಮೆಸ್ಸಿ ಪೊಲೀಸರಿಗೆ ಬೇಕಾಗಿರುವ ಆರೋಪಿಯಾಗಿದ್ದಾನೆ. ಕಳೆದ ಒಂದು ವರ್ಷದಿಂದ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದ್ದರೂ ಆರೋಪಿ ಸಿಕ್ಕಿರಲಿಲ್ಲ. ಬದಲಾಗಿ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ. ಜಾಮೀನು ಮಂಜೂರಾದರೂ ಪೊಲೀಸರ ವಿಚಾರಣೆಗೆ ಹಾಜರಾಗಿರಲಿಲ್ಲ.
ಹೀಗಾಗಿ, ಆತನ ಶೋಧ ಕಾರ್ಯ ನಡೆಸುವಾಗ ನಗರದಲ್ಲಿ ಅವಿತುಕೊಂಡಿರುವ ಬಗ್ಗೆ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಂಧೆಕೋರರನ್ನು ಬಂಧಿಸಿ ವಿಚಾರಣೆಗಾಗಿ 14 ದಿನಗಳ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಪಬ್ನೊಳಗೆ 3 ವರ್ಷದ ಹೆಣ್ಣು ಮಗುವಿಗೂ ಪ್ರವೇಶ: ಪಬ್ ಮಾಲೀಕರಿಗೆ ಪೊಲೀಸರ ನೋಟಿಸ್