ಹಾಸನ: ಇಂದು ವರನಟ ಡಾ. ರಾಜ್ಕುಮಾರ್ ಅವರ 92ನೇ ವರ್ಷದ ಹುಟ್ಟುಹಬ್ಬ. ಲಾಕ್ಡೌನ್ ಆದೇಶ ಇರುವುದರಿಂದ ಅಭಿಮಾನಿಗಳು ತಾವು ಇರುವಲ್ಲಿಯೇ ಅಣ್ಣಾವ್ರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಹಾಸನದಲ್ಲಿ ಕೂಡಾ 20 ಮಂದಿ ಪೌರಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ಡಾ. ರಾಜ್ ಬರ್ತಡೇಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಅಡ್ಲಿಮನೆ ರಸ್ತೆ, ಶಿವಜ್ಯೋತಿ ಕಲ್ಯಾಣ ಮಂಟಪ ಬಳಿ ಅಭಿಮಾನಿ ಸಂಘದಿಂದ ಏರ್ಪಡಿಸಲಾಗಿದ್ದ ಡಾ. ರಾಜ್ಕುಮಾರ್ ಹುಟ್ಟುಹಬ್ಬವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ನಂತರ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ 20 ಮಂದಿ ಪೌರಕಾರ್ಮಿಕರಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಅವರಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನು ನೀಡಿದರು. ಕಾರ್ಯಕ್ರಮದ ನಂತರ ಮಾತನಾಡಿದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜು, ವರನಟ ಕನ್ನಡಿಗರ ಆರಾಧ್ಯ ದೇವರಾದ ಡಾ. ರಾಜಕುಮಾರ್ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶವೇ ಲಾಕ್ಡೌನ್ ಆಗಿರುವ ಹಿನ್ನೆಲೆ ಜನರು ತತ್ತರಿಸಿಹೋಗಿದ್ದಾರೆ. ಪೌರ ಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಹಗಲು ರಾತ್ರಿ ಎನ್ನದೆ, ತಮ್ಮ ಜೀವವನ್ನು ಲೆಕ್ಕಿಸದೆ ಜನಗಳ ಸೇವೆಯಲ್ಲಿ ತೊಡಗಿದ್ದಾರೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಅವರ ಸೇವೆಗೆ ಅಭಿನಂದಿಸಿ, ಪ್ರೋತ್ಸಾಹಿಸುತ್ತಿದ್ದೇವೆ ಎಂದು ಹೇಳಿದರು.