ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಡಾ. ಜಯಮಾಲ ಅವರ 6 ವರ್ಷಗಳ ಎಂಎಲ್ಸಿ ಅವಧಿ ಮುಗಿದಿದೆ. ಜಯಮಾಲ ಕಾಂಗ್ರೆಸ್ ಪಕ್ಷದಿಂದ ಎಂಎಲ್ಸಿ ಆಗಿ ಆಯ್ಕೆ ಆಗಿದ್ದರು. ನಿನ್ನೆ ಜಯಮಾಲ ಅವರೊಂದಿಗೆ 17 ವಿಧಾನ ಪರಿಷತ್ ಸದಸ್ಯರ ಅವಧಿ ಮುಕ್ತಾಯವಾಗಿದ್ದರಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
2014 ಜೂನ್ ತಿಂಗಳಿನಲ್ಲಿ ವಿಧಾನ ಪರಿಷತ್ ಸದಸ್ಯೆ ಆಗಿ ಜಯಮಾಲ ಆಯ್ಕೆ ಆಗಿದ್ದರು. ನಾಲ್ಕು ವರ್ಷಗಳಲ್ಲಿ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 2018 ರಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿ ಆಗಿ ಮಹಿಳಾ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದರು. ಆಗಲೇ ಅವರು ವಿಧಾನ ಪರಿಷತ್ ನಾಯಕಿ ಕೂಡಾ ಆಗಿದ್ದರು. ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಜಯಮಾಲ ಏಕೈಕ ಮಹಿಳಾ ಸಚಿವೆ ಆಗಿದ್ದರು.
ಜಯಮಾಲ ಗ್ರಾಮೀಣ ಮಹಿಳಾ ಪುನರ್ವಸತಿ ವಿಚಾರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಪುಸ್ತಕ ಬರೆದು ಡಾಕ್ಟರೇಟ್ ಪಡೆದ ಏಕೈಕ ಭಾರತೀಯ ಚಿತ್ರನಟಿ ಎಂದು ಕೂಡಾ ಜಯಮಾಲ ಹೆಸರಾಗಿದ್ದಾರೆ. ಕಾಂಗ್ರೆಸ್ಗೆ ಸೇರಿದಾಗಿನಿಂದ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. 2008 ರಲ್ಲಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಆಗಿ ಕೂಡಾ ಜಯಮಾಲ ಕೆಲಸ ಮಾಡಿದ್ದಾರೆ. ಆ ಅವಧಿಯಲ್ಲಿ ಕನ್ನಡ ಚಿತ್ರರಂಗದ 75 ವರ್ಷಗಳ ಸಮಾರಂಭವನ್ನು ವಿಜೃಂಭಣೆಯಿಂದ ಮಾಡಲಾಗಿತ್ತು.