ಬಹಳ ದಿನಗಳ ಗ್ಯಾಪ್ ನಂತರ ಶಾನೆ ಟಾಪ್ ಸುಂದ್ರಿ ಅದಿತಿ ಪ್ರಭುದೇವ 'ಗಜಾನನ & ಗ್ಯಾಂಗ್' ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇದೀಗ ಚಿತ್ರತಂಡ ಛಾಯಾಗ್ರಾಹಕ ಉದಯ್ ಲೀಲಾ ಅವರನ್ನು ಚಿತ್ರತಂಡಕ್ಕೆ ವಿಶೇಷ ವಿಡಿಯೋ ಮಾಡುವ ಮೂಲಕ ವಿಭಿನ್ನವಾಗಿ ಸ್ವಾಗತಿಸಿದ್ದಾರೆ.
ಈಗಾಗಲೇ ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ ಶ್ರೀ ಮಹದೇವ್ 'ಇರುವುದೆಲ್ಲವ ಬಿಟ್ಟು' ಚಿತ್ರದ ನಂತರ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ 'ಗಜಾನನ & ಗ್ಯಾಂಗ್' ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ಬಣ್ಣ ಹಚ್ಚುತ್ತಿದ್ದಾರೆ.
'ನಮ್ ಗಣಿ ಬಿಕಾಂ ಪಾಸ್' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಭಿಷೇಕ್ ಶೆಟ್ಟಿ ನಟನೆಯಿಂದ ನಿರ್ದೇಶನದತ್ತ ಮುಖ ಮಾಡಿದ್ದು, 'ಗಜಾನನ & ಗ್ಯಾಂಗ್' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. 2014-2021 ವರೆಗೆ ಸಮಾಜದಲ್ಲಿ ನಡೆಯುವ ವಿವಿಧ ಘಟನೆಗಳ ಸುತ್ತ ನಡೆಯುವ ಕೆಲವು ಸನ್ನಿವೇಶಗಳನ್ನು ಚಿತ್ರದ ಮೂಲಕ ತೋರಿಸಲು ಅಭಿಷೇಕ್ ಶೆಟ್ಟಿ ರೆಡಿಯಾಗಿದ್ದಾರೆ. ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಸಾಗುವ ಈ ಚಿತ್ರದ ಕಥೆ 2021 ರಿಂದ ಆರಂಭವಾಗಿ 2014 ಹಳೆಯ ದಿನಗಳವರೆಗೂ ಸಾಗಲಿದೆಯಂತೆ.
ಗೆಳೆತನ, ಮಧ್ಯಮ ವರ್ಗದ ಪ್ರೀತಿ ಹಾಗೂ ಇನ್ನಿತರ ಅರ್ಥಪೂರ್ಣ ಅಂಶಗಳು 'ಗಜಾನನ & ಗ್ಯಾಂಗ್' ಚಿತ್ರದಲ್ಲಿದ್ದು ಸಂಪೂರ್ಣ ಮನರಂಜನೆ ಕೊಡಲು ತಂಡ ಸಿದ್ಧವಾಗಿದೆ. ಬೃಂದಾವನ್ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಯು.ಎಸ್. ನಾಗೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಉದಯ್ ಲೀಲಾ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು ಸದ್ಯದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ.