ಆಗಸ್ಟ್ 23 'ಟಗರು' ಖ್ಯಾತಿಯ ಡಾಲಿ ಧನಂಜಯ್ ಹುಟ್ಟಿದ ದಿನ. ಈ ಬಾರಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೂ ಈ ಬರ್ತ್ಡೇ ಕೂಡಾ ಅವರಿಗೆ ಬಹಳ ವಿಶೇಷ ಎನ್ನಬಹುದು. ಏಕೆಂದರೆ ಡಾಲಿ ಈ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
'ಟಗರು' ಚಿತ್ರಕ್ಕಿಂತ ಮುನ್ನ ಧನಂಜಯ್ ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ, ಅಲ್ಲಮ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಹೇಳಿಕೊಳ್ಳುವಂತ ಹೆಸರು ಸಿಗಲಿಲ್ಲ. ಆದರೆ 'ಟಗರು' ಚಿತ್ರದ ಡಾಲಿ ಪಾತ್ರವಂತೂ ಅವರಿಗೆ ಎಷ್ಟರ ಮಟ್ಟಿಗೆ ಹೆಸರು ನೀಡ್ತು ಅಂದ್ರೆ ಆ ಚಿತ್ರದ ಪಾತ್ರವೇ ಅವರ ಹೆಸರಿನ ಜೊತೆ ತಳುಕುಹಾಕಿಕೊಂಡಿತು. ಈ ಚಿತ್ರ ಧನಂಜಯ್ಗೆ ದೊಡ್ಡ ಬ್ರೇಕ್ ನೀಡ್ತು. ಅಲ್ಲಿಂದ ಧನಂಜಯ್ಗೆ ಒಂದಾದ ಮೇಲೊಂದರಂತೆ ಆಫರ್ಗಳು ಬರಲು ಆರಂಭಿಸಿದವು.
ಸದ್ಯಕ್ಕೆ ಧನಂಜಯ್ ಭೂಗತ ಲೋಕದ ಮಾಜಿ ಡಾನ್ ಎಂ.ಪಿ. ಜಯರಾಜ್ ಬಯೋಪಿಕ್ ಹೆಡ್ ಬುಷ್, ಜೀವನಾನೆ ನಾಟ್ಕ ಸ್ವಾಮಿ, ಬಡವ ರ್‍ಯಾಸ್ಕಲ್, ರತ್ನನ್ ಪ್ರಪಂಚ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾಗಳ ಚಿತ್ರೀಕರಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು 'ಹೆಡ್ ಬುಷ್' ಚಿತ್ರೀಕರಣ ಮೊದಲು ಆರಂಭವಾಗಲಿದೆ. ಈ ಚಿತ್ರಕ್ಕಾಗಿ ಧನಂಜಯ್ ವರ್ಕೌಟ್ ಮಾಡಿ ತೂಕ ಹೆಚ್ಚಿಸಿಕೊಂಡಿದ್ದಾರೆ.
ಧನಂಜಯ್ ದುನಿಯಾ ವಿಜಯ್ ಜೊತೆ ನಟಿಸಿರುವ 'ಸಲಗ' ಸಿನಿಮಾ ಬಿಡುಗಡೆಯಾಗಬೇಕಿದೆ. ಇವೆಲ್ಲದರ ಜೊತೆಗೆ ಪುನೀತ್ ಜೊತೆ 'ಯುವರತ್ನ', ಧ್ರುವ ಸರ್ಜಾ ಜೊತೆ 'ಪೊಗರು' ಚಿತ್ರದಲ್ಲಿ ಕೂಡಾ ಧನಂಜಯ್ ಇದ್ದಾರೆ. ಬಿಡುಗಡೆಯಾಗಬೇಕಿರುವ 3 ಸಿನಿಮಾಗಳು, ಹೊಸದಾಗಿ ಒಪ್ಪಿಕೊಂಡಿರುವ 4 ಸಿನಿಮಾಗಳು ಡಾಲಿ ಬತ್ತಳಿಕೆಯಲ್ಲಿವೆ. ಒಟ್ಟಿನಲ್ಲಿ ಈ ಬಾರಿ ಡಾಲಿ ಹುಟ್ಟುಹಬ್ಬ ಸರಳವಾದರೂ ಬಹಳ ವಿಶೇಷವಾಗಿತ್ತು ಎನ್ನಬಹುದು.