ಭಾರತದ ಹೆಸರಾಂತ ವೈದ್ಯ ಬಿ.ಸಿ. ರಾಯ್ ಅವರ ಜನ್ಮದಿನ ಮತ್ತು ನಿಧನದ ದಿನವಾದ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಕೊರೊನಾ ಸಂದರ್ಭದಲ್ಲಿ ಪ್ರತಿಯೊಬ್ಬ ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನಮ್ಮೆಲ್ಲರ ಆರೋಗ್ಯವನ್ನು ಸದಾ ಕಾಳಜಿಯಿಂದ ನೋಡುವ ವೈದ್ಯರ ಕೆಲಸಕ್ಕೆ ನಟಿ ರಾಗಿಣಿ ದ್ವಿವೇದಿ ಗೌರವ ಸಲ್ಲಿಸಿದ್ದಾರೆ.
ಈ ಕುರಿತು ವಿಡಿಯೋ ಮಾಡಿ ಮಾತನಾಡಿರುವ ಅವರು, ಮಹಾಮಾರಿ ಕೊರೊನಾ ಇರುವ ಈ ಸಮಯದಲ್ಲಿ ವೈದ್ಯರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ನಾವು ಅವರನ್ನು ದೇವರು, ಜೀವ ರಕ್ಷಕರು, ಕೊರೊನಾ ವಾರಿಯರ್ಸ್ ಎಂದು ಕರೆಯುತ್ತಿದ್ದೇವೆ. ಅವರ ನಿಸ್ವಾರ್ಥ ಸೇವೆಗೆ ನಾವು ಥ್ಯಾಂಕ್ಸ್ ಹೇಳಲೇಬೇಕು. ಇಂದು ನಾವು ಸುರಕ್ಷಿತವಾಗಿರಲು ವೈದ್ಯರು ಕಳೆದ 18 ತಿಂಗಳಿನಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಕಡೆಯಿಂದ ಎಲ್ಲಾ ವೈದ್ಯರಿಗೂ ನಾನು ಥ್ಯಾಂಕ್ಸ್ ಹೇಳಲು ಬಯಸುತ್ತೇನೆ ಎಂದರು.
ಈ ಮಧ್ಯೆ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ. ಆದರೆ ವೈದ್ಯರು ಅವರ ಕುಟುಂಬಗಳನ್ನು ರಿಸ್ಕ್‌ನಲ್ಲಿಟ್ಟು ನಮ್ಮನ್ನು ಕಾಪಾಡುತ್ತಾರೆ. ನಮಗೆ ಒಳ್ಳೆಯದಾಗಲಿ ಎಂದು ಅವರು ಎಷ್ಟು ಸಾಧ್ಯವೋ ಅಷ್ಟು ಕಷ್ಟಪಡುತ್ತಿದ್ದಾರೆ. ಹಾಗಾಗಿ ಅವರ ಮೇಲೆ ಹಲ್ಲೆ ಮಾಡಬೇಡಿ, ಅವಾಚ್ಯವಾಗಿ ಮಾತನಾಡಬೇಡಿ ಎಂದು ರಾಗಿಣಿ ಮನವಿ ಮಾಡಿದ್ದಾರೆ.