ಸದ್ಯಕ್ಕೆ ಭಟ್ಟರು ಮುಂಬೈನಲ್ಲಿದ್ದಾರೆ. ಅವರ ಜೊತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಕೂಡಾ ಇದ್ದಾರೆ. ಅರೆ..ಇಬ್ಬರೂ ಮುಂಬೈನಲ್ಲಿ ಏನು ಮಾಡುತ್ತಿದ್ದಾರೆ ಎಂದು ಯೋಚಿಸಬೇಡಿ. ಈಗಾಗಲೇ ಭಟ್ಟರು ಗಾಳಿಪಟ-2 ಸಿನಿಮಾ ಕೆಲಸಗಳಿಗೆ ಚಾಲನೆ ನೀಡಿದ್ದು ಮುಂಬೈ ಸ್ಟುಡಿಯೋವೊಂದರಲ್ಲಿ ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಡುಗಳ ರೆಕಾರ್ಡಿಂಗ್ ಮುಗಿಸಿದ ಕೂಡಲೇ ಭಟ್ಟರು ಶೂಟಿಂಗ್ ಆರಂಭಿಸಲಿದ್ದಾರೆ. ಯೋಗರಾಜ್ ಭಟ್ ಹಾಗೂ ಜನ್ಯಾ ಜೊತೆಗಿರುವ ಫೋಟೋವೊಂದು ರಿವೀಲ್ ಆಗಿದ್ದು ಈ ಮೂಲಕ ಭಟ್ಟರು ಗಾಳಿಪಟ-2 ಕೈಬಿಟ್ಟಿದ್ದಾರೆ ಎಂಬುವವರಿಗೆ ಉತ್ತರ ಕೊಟ್ಟಿದ್ದಾರೆ.
ಗಾಳಿಪಟ-2 ನಿರ್ದೇಶನ ಮಾಡುವುದಾಗಿ ಯೋಗರಾಜ್ ಭಟ್ ಕೆಲವು ದಿನಗಳ ಮುನ್ನವೇ ಅನೌನ್ಸ್ ಮಾಡಿದ್ದರು. ಚಿತ್ರಕ್ಕಾಗಿ ಐವರು ನಾಯಕಿಯರನ್ನೂ ಕೂಡಾ ಕರೆತರುತ್ತಿರುವುದಾಗಿ ಅವರು ಹೇಳಿದ್ದರು. ಸದ್ಯಕ್ಕೆ ಶರ್ಮಿಳಾ ಮಾಂಡ್ರೆ, ಸೋನಲ್ ಮೊಂಟೆರಿ ಆಯ್ಕೆಯಾಗಿದ್ದು ಉಳಿದ ಮೂವರು ನಾಯಕಿಯರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.
ಇನ್ನು ಚಿತ್ರಕ್ಕೆ ಶರಣ್, ರಿಷಿ, ಪವನ್ ಕುಮಾರ್ ಪ್ರಮುಖ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರು, ಮಂಡ್ಯ, ಧಾರವಾಡದಿಂದ ಬಂದ ಮೂವರು ಯುವಕರ ಬಾಳು, ಗೋಳು, ಪ್ರೇಮ, ಶಿಕ್ಷಣ, ವೃತ್ತಿಯ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ಮಹೇಶ್ ದಾನನ್ನವರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕರ್ನಾಟಕದ ಕರಾವಳಿ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಸಲು ಭಟ್ಟರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.