ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರ ಜಿ ಅಕಾಡೆಮಿ ತಂಡಕ್ಕೆ ನಿರ್ದೇಶಕ ಶಶಾಂಕ್ ಸೇರಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಸಿಕ್ಸರ್ ' ಚಿತ್ರದ ಮೂಲಕ ಶಶಾಂಕ್ ಬಣ್ಣದ ಯಾನ ಆರಂಭಿಸಿ ನಂತರ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ, ಜರಾಸಂಧ, ಬಚ್ಚನ್, ಕೃಷ್ಣರುಕ್ಕು, ತಾಯಿಗೆ ತಕ್ಕ ಮಗ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು ಶಶಾಂಕ್. ಚಿತ್ರರಂಗದಲ್ಲಿ ನಟನೆ ಹಾಗೂ ನಿರ್ದೇಶನದಲ್ಲಿ ತಮಗೆ ಇರುವ ಅನುಭವವನ್ನು ಶಶಾಂಕ್ ಅವರು ಗುರು ದೇಶಪಾಂಡೆ ಅವರ ಜಿ ಅಕಾಡೆಮಿ ವಿದ್ಯಾರ್ಥಿಗಳಿಗೆ ತಿಳಿಸಲು ಹೊರಟಿದ್ದಾರೆ. ಲಾಕ್ಡೌನ್ ನಂತರ ಜಿ ಅಕಾಡೆಮಿ ಮತ್ತೆ ಆರಂಭವಾಗಿದ್ದು ಇದೀಗ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಕೂಡಾ ಆರಂಭಿಸಲಾಗಿದೆ. ಕೊರೊನಾ ಭೀತಿ ಇರುವುದರಿಂದ ತರಗತಿಯಲ್ಲಿ ಎಲ್ಲಾ ರೀತಿಯ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಜಿ ಅಕಾಡೆಮಿ ತರಬೇತಿ ಶಾಲೆಯಲ್ಲಿ ಉಪನ್ಯಾಸಕರಾಗಿ ಸುನಿಲ್ ಕುಮಾರ್ ದೇಸಾಯಿ, ಸುರೇಶ್ ಅರಸ್, ಜಯ ಪ್ರಕಾಶ್ ಶೆಟ್ಟಿ, ಶಿಲ್ಪಾ ದೇಶಪಾಂಡೆ, ಬಿ.ಟಿ. ಮಂಜುನಾಥ್, ನಾಗರಾಜ ನಾಯ್ಡು ಹಾಗೂ ಇನ್ನಿತರರಿದ್ದಾರೆ. ಈ ಜಿ ಅಕಾಡೆಮಿಯಲ್ಲಿ ತರಬೇತಿ ಜೊತೆಗೆ ನಿರ್ದೇಶಕ ಸ್ಥಾನ ಅಲಂಕರಿಸಬೇಕಾದವರು ಒಂದು ಕಿರುಚಿತ್ರವನ್ನೂ ನಿರ್ದೇಶಿಸಬೇಕು.