ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಚಿತ್ರದ ನಿರ್ಮಾಪಕರು, ನಿರ್ದೇಶಕ ಶಂಕರ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಇಂದು ನಿರ್ದೇಶಕ ಶಂಕರ್ ಕೂಡ ಅರ್ಜಿ ಸಲ್ಲಿಸಿದ್ದಾರೆ.
ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ಇಂಡಿಯನ್-2 ಚಿತ್ರವು ಹಲವು ಕಾರಣಗಳಿಂದಾಗಿ ವಿಳಂಬವಾಗಿತ್ತು. ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದ್ದು, ಇನ್ನೂ ಕೂಡ ಸೆಟ್ಟೇರಲಿಲ್ಲ, ಇದು ನಿರ್ದೇಶಕ ಶಂಕರ್ ಮತ್ತು ಲೈಕಾ ಪ್ರೊಡಕ್ಷನ್ಸ್ ನಡುವಿನ ಬಿರುಕಿಗೆ ಕಾರಣವಾಗಿತ್ತು.
ಇದರಿಂದ 'ಇಂಡಿಯನ್ 2' ಸಿನಿಮಾ ಪೂರ್ಣಗೊಳ್ಳುವವರೆಗೂ ಬೇರೆ ಯಾವುದೇ ಚಿತ್ರವನ್ನು ನಿರ್ದೇಶಿಸಬಾರದು ಎಂದು ಲೈಕಾ ಪ್ರೊಡಕ್ಷನ್ಸ್ ನಿರ್ದೇಶಕ ಶಂಕರ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಇದಕ್ಕೆ ಪ್ರತಿಯಾಗಿ ಇಂದು ಶಂಕರ್ ಕೂಡ ಪ್ರತಿ ಅರ್ಜಿಯನ್ನು ಸಲ್ಲಿಸಿದ್ದು, ವಿಳಂಬಕ್ಕೆ ಕಾರಣವೆಂದರೆ ಪ್ರೊಡಕ್ಷನ್ ಹೌಸ್ ಲೈಕಾ ಮತ್ತು ನಟ ಕಮಲ್ ಹಾಸನ್ ಎಂದು ದೂರಿದ್ದಾರೆ.
ಕಮಲ್ ಹಾಸನ್‌ಗೆ ಮೇಕಪ್ ಅಲರ್ಜಿ ಇದೆ, ಅಲ್ಲದೇ ಆ ಮಧ್ಯ ಕಾಲದಲ್ಲಿ ಕ್ರೇನ್ ಅಪಘಾತವಾಗಿತ್ತು. ಇದೀಗ ಕೋವಿಡ್ ಕರ್ಫ್ಯೂ ಮತ್ತು ಇತರ ಕಾರಣಗಳಿಂದ ವಿಳಂಬವಾಗಿದೆ. ಚಿತ್ರದ ನಿರ್ಮಾಣ ಪ್ರಕ್ರಿಯೆಯಲ್ಲಿ ಉಂಟಾದ ಯಾವುದೇ ನಷ್ಟಕ್ಕೆ ತಾನು ಜವಾಬ್ದಾರನಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಜೂನ್ ವೇಳೆಗೆ ಶೂಟಿಂಗ್ ಪ್ರಕ್ರಿಯೆಯನ್ನು ಪುನರಾರಂಭಿಸಲು ಸಿದ್ಧ ಎಂದು ಅರ್ಜಿಯಲ್ಲಿ ನಿರ್ದೇಶಕರು ತಿಳಿಸಿದ್ದಾರೆ.