''ನೀನು ಗೆದ್ದರೆ ಜಗತ್ತಿಗೆ ನಿನ್ನ ಪರಿಚಯ ಆಗುತ್ತದೆ'' ಈ ಡೈಲಾಗ್ ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಕೆಜಿಎಫ್ ಸಿನಿಮಾದ ಒಂದು ಡೈಲಾಗ್. ಈ ಮಾತಿನಂತೆ ಯಶಸ್ಸಿನ ಮೂಲಕವೇ ಸಿನಿಮಾ ಜಗತ್ತಿಗೆ ಪರಿಚಯವಾದ ಬಹಳ ಸರಳ ಹಾಗೂ ಟ್ಯಾಲೆಂಟೆಡ್ ನಿರ್ದೇಶಕ ಪ್ರಶಾಂತ್ ನೀಲ್. ಉಗ್ರಂನ ಸಾರಥಿ ಹಾಗೂ ಕೆಜಿಎಫ್ ಚಿತ್ರದ ಸೃಷ್ಟಿಕರ್ತ ಪ್ರಶಾಂತ್ ನೀಲ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಅದೃಷ್ಟದ ಜತೆಗೆ ಟ್ಯಾಲೆಂಟ್ ಇದ್ರೆ ಇಡೀ ದೇಶವೇ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಬಹುದು ಅನ್ನೋದಕ್ಕೆ ಉದಾಹರಣೆಯೇ ನಿರ್ದೇಶಕ ಪ್ರಶಾಂತ್ ನೀಲ್. ಮೂಲತಃ ಬೆಂಗಳೂರಿನವರಾದ ಪ್ರಶಾಂತ್ ನೀಲ್, ಜೂನ್ 4, 1980ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದು, ಇಂದು 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಮೋತಿ ಮಹಲ್ ಹೋಟೆಲ್ ಮಾಲೀಕ ಸುಭಾಷ್ ಅವರ ಪುತ್ರ ಪ್ರಶಾಂತ್ ನೀಲ್. ಶ್ರೀಮಂತ ಕುಟುಂಬದಲ್ಲಿ ಹುಟ್ಟಿರುವ ಪ್ರಶಾಂತ್ ನೀಲ್ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದೇ ಇಂಟ್ರೆಸ್ಟಿಂಗ್. ಒಂದಿಷ್ಟು ಶ್ರೀಮಂತಿಕೆಯನ್ನು ಸಹ ತಲೆಗೆ ಅಂಟಿಸಿಕೊಳ್ಳದ ವ್ಯಕ್ತಿತ್ವ ಇವರದ್ದು. ಡಿಗ್ರಿ ಮುಗಿಸಿರೋ ಪ್ರಶಾಂತ್ ನೀಲ್, ಸಿನಿಮಾ ರಂಗಕ್ಕೆ ಬರಲು ಕಾರಣ ಸಂಬಂಧಿಯಾಗಿರೋ ನಟ ಶ್ರೀಮುರಳಿ ಅಂತಾನೇ ಹೇಳಬಹುದು.
ನಟ ಶ್ರೀಮುರಳಿ ಹಾಗೂ ಪ್ರಶಾಂತ್ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು. ಪ್ರಶಾಂತ್ ನೀಲ್ ಶೇಷಾದ್ರಿಪುರಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಕಾಲೇಜು ದಿನಗಳಿಂದಲೂ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದರು.
ತಾವು ನಿರ್ದೇಶಕರಾಗುವುದಕ್ಕಿಂತ ಮೊದಲು ಮುರಳಿ ನಟನೆಯ ಚಿತ್ರಗಳ ಶೂಟಿಂಗ್ ಸೆಟ್‌ಗೆ ಹೋಗಿ ಬಂದಿದ್ದರು ಅಷ್ಟೇ. ಅಲ್ಲಿಂದ ಪ್ರಶಾಂತ್ ನೀಲ್, ತನಗೆ ತಾನೇ ಶಿಷ್ಯ, ತಾನೇ ಗುರುವಾಗಿ ಸಿನಿಮಾ ಕಟ್ಟುವುದನ್ನು ಕಲಿತವರು. ಆಗ ಪ್ರಶಾಂತ್ ನೀಲ್ ಶ್ರೀಮುರಳಿಗೆ ನಂದೇ ಎಂಬ ಸಿನಿಮಾ ಟೈಟಲ್ ಇಟ್ಟು ನಿರ್ದೇಶನಕ್ಕೆ ಇಳಿಯುತ್ತಾರೆ.
ನಾಲ್ಕು ವರ್ಷ ಸಮಯ ತೆಗೆದುಕೊಂಡು ನಿರ್ದೇಶನ ಮಾಡಿದ ಚಿತ್ರ ಉಗ್ರಂ. ಆರಂಭದಲ್ಲಿ ನಂದೇ ಎನ್ನುವ ಟೈಟಲ್ ಇತ್ತು. ಸಿನಿಮಾ ಅರ್ಧಕ್ಕೂ ಹೆಚ್ಚು ಚಿತ್ರೀಕರಣ ಮಾಡಿಕೊಂಡ ಮೇಲೆ ಉಗ್ರಂ ಎಂದು ಬದಲಾಯಿತು. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸುತ್ತೆ ಅಂತಾ ಯಾರೂ ಅಂದುಕೊಂಡಿರಲಿಲ್ಲ.
ಒಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಪ್ರಶಾಂತ್ ನೀಲ್ ಅವರು ನಿರ್ದೇಶಕರಾಗುವ ಮುನ್ನ ಬೇರೆ ನಿರ್ದೇಶಕರ ಚಿತ್ರಗಳಿಗೆ ಅಸಿಸ್ಟೆಂಟ್, ಅಸೋಸಿಯೇಟ್ ಅಥವಾ ಕ್ಲಾಪ್‌ಬಾಯ್ ಕೆಲಸ ಕೂಡ ಮಾಡಿದವರಲ್ಲ. ಯಾವ ತರಬೇತಿ ಸಂಸ್ಥೆಯಲ್ಲೂ ತರಬೇತಿ ಪಡೆದಿಲ್ಲ.
ಇನ್ನು ಎಲ್ಲವನ್ನೂ ಮೊದಲೇ ಕಲಿತು ಸಿನಿಮಾ ಮಾಡುತ್ತೇನೆ ಎಂಬ ಜನರಿದ್ದಾರೆ. ಆದರೆ ಕೆಲಸ ಮಾಡುತ್ತಲೇ ಕಲಿಯುತ್ತೇನೆ ಎನ್ನುವವರ ಪೈಕಿ ಪ್ರಶಾಂತ್ ನೀಲ್ ಒಬ್ಬರು. ಯಾಕೆಂದರೆ ನಿರ್ದೇಶಕ ಪ್ರಶಾಂತ್ ನೀಲ್‌ಗೆ ಉಗ್ರಂ ಚಿತ್ರ ನಿರ್ದೇಶನ ಮಾಡುವಾಗ ಸಿನಿಮಾ ವ್ಯಾಕರಣ ಸಹ ಗೊತ್ತಿರಲಿಲ್ಲ. ಆದರೆ, ಆ ಚಿತ್ರ ಮುಗಿಸುವ ಹೊತ್ತಿಗೆ ಸಿನಿಮಾ, ನಿರ್ದೇಶನ ಸೇರಿದಂತೆ, ಸಿನಿಮಾದ ಎಲ್ಲಾ ವಿಭಾಗಗಳಲ್ಲಿ ಪ್ರಶಾಂತ್ ಪ್ರಾಕ್ಟಿಕಲ್ ಆಗಿ ಕೆಲಸ ಮಾಡಿ ಕಲಿಯುತ್ತಾರೆ.
ಪ್ರಶಾಂತ್ ನೀಲ್‌ಗೆ ಒಂದು ಸಣ್ಣ ವಿಕ್ನೇಸ್ ಕೂಡ ಇದೆ. ಕ್ಯಾಮರಾ ಮುಂದೆ ನಿಂತು ಮಾತನಾಡುವುದು, ನಟಿಸುವುದು ಅಂದರೆ ಪ್ರಶಾಂತ್ ನೀಲ್‌ಗೆ ಭಯ. ಹೌದು, ಪ್ರಶಾಂತ್ ಆಪ್ತರ ಬಳಗದಲ್ಲಿ ಕೇಳಿ ಬರುವ ಮಾತಿದು. ಕೆಜಿಎಫ್ ಸಿನಿಮಾ ಮಾಡುವಾಗ ಇದು ಬಹುಭಾಷೆಯ ಸಿನಿಮಾ ಆಗುತ್ತೆ ಎಂದು ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ಗೂ ಗೊತ್ತಿರಲಿಲ್ಲ. ಆದ್ರೆ ಕೆಜಿಎಫ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು.
ಎರಡನೇ ಚಿತ್ರಕ್ಕೆ ಭಾರತೀಯ ಸ್ಟಾರ್ ಸಿನಿಮಾ ನಿರ್ದೇಶಕರ ಹೆಸರುಗಳ ಸಾಲಿಗೆ ಪ್ರಶಾಂತ್ ನೀಲ್ ಸೇರ್ಪಡೆಗೊಳ್ಳುತ್ತಾರೆ ಅಂತಾ ಕೂಡ ಯಾರೂ ಊಹಿಸಿರಲಿಲ್ಲ. ನೀನು ಗೆದ್ದರೆ ಜಗತ್ತಿಗೆ ನಿನ್ನ ಪರಿಚಯ ಆಗುತ್ತದೆ ಎನ್ನುವ ಚಾರಿತ್ರಿಕ ಮಾತನ್ನು ಪ್ರಶಾಂತ್ ನೀಲ್ ನಿಜ ಮಾಡಿದರು.
ಇದನ್ನೂ ಓದಿ: ಎದೆತುಂಬಿ ಹಾಡಿದ ಗಾನ ಗಾರುಡಿಗನ ಜನ್ಮದಿನ: SPB ಗಾಯಕರಾಗಿದ್ದೇ ಕುತೂಹಲದ ಸಂಗತಿ
ಸದ್ಯ ಕನ್ನಡದ ಪುನೀತ್ ರಾಜ್‌ಕುಮಾರ್, ಯಶ್ ಸೇರಿದಂತೆ ತೆಲುಗಿನ ಜೂ. ಎನ್‌ಟಿಆರ್, ಪ್ರಭಾಸ್ ಮುಂತಾದ ಸ್ಟಾರ್ ಹೀರೋಗಳ ಸಿನಿಮಾಗಳಿಗೆ ಪ್ರಶಾಂತ್ ನೀಲ್ ನಿರ್ದೇಶನದ ಮಾಡುತ್ತಿರೋದು ಹೆಮ್ಮೆಯ ವಿಷಯ. ಇನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳು, ನಿರ್ದೇಶಕ ಪ್ರಶಾಂತ್ ನೀಲ್ ಜತೆಗೆ ಸಿನಿಮಾ ನಿರ್ಮಾಣ ಮಾಡಲು ರೆಡಿಯಾಗಿವೆ.
ಸದ್ಯ ಕೆಜಿಎಫ್ 2 ಹಾಗೂ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಪ್ರಶಾಂತ್ ನೀಲ್ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಅನ್ನೋದು ಅವ್ರ ಅಭಿಮಾನಿಗಳ ಹಾರೈಕೆಯಾಗಿದೆ.