2009ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ ಎದ್ದೇಳು ಮಂಜುನಾಥ. ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಗುರು ಪ್ರಸಾದ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬಂದಿತ್ತು. ಇದೀಗ ಎದ್ದೇಳು ಮಂಜುನಾಥ -2 ಚಿತ್ರತಂಡ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದೆ.
ಈ ಚಿತ್ರಕ್ಕೆ ಈ ಬಾರಿ ಹೀರೋ ಜಗ್ಗೇಶ್ ಅಲ್ಲ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಅನೇಕ ವಿಚಾರಗಳನ್ನು ಗುರುಪ್ರಸಾದ್ ಹಂಚಿಕೊಂಡರು.
ಎದ್ದೇಳು ಮಂಜುನಾಥ ಚಿತ್ರದ ಸಮಯದಲ್ಲೇ ಸಿದ್ದವಾದ ಕಥೆಯಿದು. ಚಿತ್ರ ನಿರ್ಮಾಣವಾಗಲು ಹತ್ತು ವರ್ಷ ಬೇಕಾಯಿತು. ಲಾಕ್ಡೌನ್ ಸಮಯದಲ್ಲಿ ಸಿನಿಮಾದ ಚಿತ್ರೀಕರಣ ನಡೆದಿತ್ತು. ನಾನು ಒಂದಿಷ್ಟು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ರವಿ ದೀಕ್ಷಿತ್, ಮೈಸೂರು ರಮೇಶ್ ಸೇರಿ ಐವತ್ತಕ್ಕೂ ಅಧಿಕ ಜನ ಶೇರ್ ಹೋಲ್ಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ನಿರ್ಮಾಪಕ ಶಶಿಧರ್ ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಕಾಮಿಡಿ, ಕ್ರೈಂ ಆಧಾರಿತ ಚಿತ್ರವಿದು. ಕ್ರೈಂ ಎಂದರೆ ಬರೇ ರಕ್ತದೋಕುಳಿಯಲ್ಲ. ಬೇರೊಂದು ರೀತಿಯಲ್ಲಿ ಹೇಳಬಹುದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.
ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ, ಸಿನಿಟಿಕ್ ಸೂರಿ, ವೇಲ್ ಮುರುಗನ್, ಅಶೋಕ್ ಸೇರಿ ನಾಲ್ಕು ಜನ ಛಾಯಾಗ್ರಾಹಕರು. ಸಿನಿಮಾದಲ್ಲಿ ಶರತ್ ಲೋಹಿತಾಶ್ವ, ಶಶಿಧರ್, ರವಿ ದೀಕ್ಷಿತ್ ಮುಂತಾದವರು ಅಭಿನಯಿಸಿದ್ದಾರೆ. ಏಪ್ರಿಲ್ ಅಂತ್ಯದಲ್ಲಿ ಓಟಿಟಿ ಅಥವಾ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಬಳಿಕ ನಟಿ ರಚಿತಾ ಮಹಾಲಕ್ಷ್ಮಿ ಮಾತನಾಡಿ, ನಾನು ಹತ್ತು ವರ್ಷಗಳಿಂದ ಕಿರುತೆರೆಯಲ್ಲಿದ್ದೇನೆ. ತಮಿಳಿನಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಸಿಕೊಟ್ಟಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಎದ್ದೇಳು ಮಂಜುನಾಥ ನನ್ನ ಇಷ್ಟದ ಚಿತ್ರ. ಎಷ್ಟು ಸಾರಿ ನೋಡಿದ್ದೇನೋ ಲೆಕ್ಕವಿಲ್ಲ. ಈಗ ಅದೇ ಚಿತ್ರದ ಎರಡನೇ ಭಾಗದಲ್ಲಿ ನಾನೇ ನಾಯಕಿಯಾಗಿರುವುದು ನನ್ನ ಪುಣ್ಯ ಎಂದರು.
ಇದನ್ನೂ ಓದಿ: ರಾಜಮೌಳಿ ಬತ್ತಳಿಕೆಯಿಂದ ಬರ್ತಿದೆ ಮತ್ತೊಂದು ಪ್ಯಾನ್-ಇಂಡಿಯಾ ಚಲನಚಿತ್ರ