ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ್ ಸಾಮಾಜಿಕ ಜಾಲತಾಣ ಹಾಗೂ ಕೆಲವೊಂದು ಮಾಧ್ಯಮಗಳ ಮೇಲೆ ಬೇಸರಗೊಂಡಿದ್ದಾರೆ. ತಮ್ಮ ಹೊಸ ಸಿನಿಮಾ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ದಿನಕರ್ ಮನವಿ ಮಾಡಿದ್ದಾರೆ.
2018 ರಲ್ಲಿ ಬಿಡುಗಡೆಯಾದ 'ಲೈಫ್ ಜೊತೆಗೊಂದು ಸೆಲ್ಫಿ' ಚಿತ್ರದ ನಂತರ ದಿನಕರ್ ತೂಗುದೀಪ್ ಹೊಸ ಚಿತ್ರವನ್ನು ನಿರ್ದೇಶಿಸಿರಲಿಲ್ಲ. ಆದರೆ ಇದೀಗ ಅವರು ಹೊಸ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಈ ಚಿತ್ರದ ಬಗ್ಗೆ ದಿನಕರ್ ಎಲ್ಲೂ ಅಧಿಕೃತವಾಗಿ ಮಾತನಾಡಿಲ್ಲ. ಆದರೆ ಸಿನಿಮಾ ಹೇಗಿರುತ್ತದೆ ಎಂಬುದರಿಂದ ಹಿಡಿದು, ಯಾರೆಲ್ಲಾ ನಟಿಸಬಹುದು ಎಂಬ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಊಹಾಪೋಹಗಳನ್ನು ಹರಿಬಿಡಲಾಗುತ್ತಿದೆಯಂತೆ. ಇದಕ್ಕೆ ದಿನಕರ್ ಟ್ವೀಟ್ ಮೂಲಕ ಉತ್ತರ ಕೊಟ್ಟಿದ್ದಾರೆ.
''ನಾನು ನನ್ನ ಹೊಸ ಚಿತ್ರದ ತಯಾರಿಯಲ್ಲಿದ್ದೇನೆ. ಇದಕ್ಕೆ ಕಲಾವಿದರ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಆದರೆ, ಕೆಲವು ವೆಬ್‍ಸೈಟ್‍ಗಳು ಹಾಗೂ ವಾಹಿನಿಗಳು ಇದನ್ನು ತಿಳಿದುಕೊಳ್ಳದೆ ತಮಗೆ ಇಷ್ಟ ಬಂದವರ ಹೆಸರನ್ನು ಸೇರಿಸಿ ಸುಳ್ಳುಸುದ್ದಿ ಹಬ್ಬಿಸುವುದು ಅವರಿಗೆ ಶೋಭೆ ತರುವುದಿಲ್ಲ. ಯಾವುದೇ ವಿಷಯವಾಗಲೀ, ಅದಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸದೆ ಪ್ರಕಟಿಸುವುದು ಸರಿಯಲ್ಲ. ಚಿತ್ರದ ಎಲ್ಲಾ ಪ್ರೀ-ಪ್ರೊಡಕ್ಷನ್ ಕೆಲಸಗಳು ಮುಗಿದ ಮೇಲೆ ನಾನೇ ಚಿತ್ರದ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡುತ್ತೇನೆ' ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.