ಇಷ್ಟು ದಿನ ರಾಗಿಣಿ, ಸಂಜನಾ ಹಾಗೂ ಇನ್ನಿತರ ಆರೋಪಿಗಳನ್ನು ಬಿಡದಂತೆ ಕಾಡಿದ ಸಿಸಿಬಿ ಅಧಿಕಾರಿಗಳ ಕಣ್ಣು ಈಗ ನಟ ದಿಗಂತ್ ಹಾಗೂ ಪತ್ನಿ ಐಂದ್ರಿತಾ ರೈ ಮೇಲೆ ಬಿದ್ದಿದೆ. ನಿನ್ನೆಯಷ್ಟೇ ಈ ದಂಪತಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು.
ಇಂದು ಬೆಳಗ್ಗೆ ಮನೆಯಿಂದ ಕೆಳಗೆ ಇಳಿದು ಬಾರದೆ ಬಾಲ್ಕನಿಯಿಂದಲೇ ಮೀಡಿಯಾಗಳೊಂದಿಗೆ ಮಾತನಾಡಿದ ಐಂದ್ರಿತಾ, ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ಮತ್ತೆ ಹೋಗುತ್ತೇವೆ ಎಂದು ಉತ್ತರಿಸಿದ್ದು ಇಬ್ಬರಿಗೂ ಈಗ ಟೆನ್ಷನ್ ಶುರುವಾಗಿದೆ. ನಾಳೆ ದಿಗಂತ್ ಹೊಸ ಚಿತ್ರ 'ಮಾರಿಗೋಲ್ಡ್' ಶೂಟಿಂಗ್ ಇದೆ. ತಮ್ಮ ರಾಜರಾಜೇಶ್ವರಿ ನಗರದ ಮನೆಯಲ್ಲೇ ದಿಗಂತ್ ವರ್ಕೌಟ್ ಮಾಡಲು ತಮ್ಮ ಕಾರಿನಿಂದ ಡಂಬಲ್ಸ್ ತೆಗೆದುಕೊಂಡು ಹೋಗುತ್ತಿದ್ದದ್ದು ಕಂಡುಬಂತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಲು ದಿಗಂತ್ ನಿರಾಕರಿಸಿದರು.
ದಿಗಂತ್ ಹಾಗೂ ಐಂದ್ರಿತಾ ಬಹಳಷ್ಟು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಒಂದು ವೇಳೆ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಲ್ಲಿ ಯಾವುದೇ ಕ್ಷಣದಲ್ಲಾದರೂ ಸಿಸಿಬಿ ಅಧಿಕಾರಿಗಳು ದಿಗಂತ್, ಐಂದ್ರಿತಾರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.