ಕನ್ನಡದ ಸೂಪರ್ ಹಿಟ್ ಸಂಗೀತ ನಿರ್ದೇಶಕರ ಪೈಕಿ ವಿ. ಹರಿಕೃಷ್ಣ ಪ್ರಮುಖರು. ಪ್ರೇಮ್ ಮತ್ತು ರಮ್ಯಾ ಅಭಿನಯದ ಜೊತೆ ಜೊತೆಯಲಿ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ಹರಿಕೃಷ್ಣ, ಅಲ್ಲಿಂದ ಇಲ್ಲಿಯವರೆಗೂ ತಮ್ಮ ಹಿಟ್ ಹಾಡುಗಳಿಂದ ಕೇಳುಗರನ್ನು ಖುಷಿಪಡಿಸುತ್ತಲೇ ಬಂದಿದ್ದಾರೆ. ಆದರೆ, ಸದ್ಯದ ಸ್ಥಿತಿಯನ್ನು ನೋಡಿದರೆ, ವಿ. ಹರಿಕೃಷ್ಣ ಸಂಗೀತ ನಿರ್ದೇಶನದಿಂದ ವಿಮುಖರಾಗಿಬಿಟ್ಟರಾ ಎಂದನಿಸುತ್ತಿದೆ.
ಅದಕ್ಕೆ ಕಾರಣ, ಕಳೆದ ಎರಡು ವರ್ಷಗಳಿಂದ ಹರಿಕೃಷ್ಣ ಯಾವೊಂದು ಹೊಸ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಿಲ್ಲ. ಧ್ರುವ ಅಭಿನಯದ ಪೊಗರು ಮತ್ತು ದರ್ಶನ್ ಅಭಿನಯದ ರಾಬರ್ಟ್ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಸಂಯೋಜಿಸಿದ್ದು ಬಿಟ್ಟರೆ, ಹರಿಕೃಷ್ಣ ಹಾಡುಗಳನ್ನು ಕೊನೆಯದಾಗಿ ನಿರ್ದೇಶಿಸಿದ್ದು ದರ್ಶನ್ ಅಭಿನಯದ ಯಜಮಾನ ಚಿತ್ರಕ್ಕೆ. ಅಲ್ಲಿಂದ ಬೇರೆ ಯಾವುದೇ ಚಿತ್ರಗಳಿಗೂ ಅವರು ಹಾಡುಗಳನ್ನು ರೆಕಾರ್ಡ್ ಮಾಡಿಲ್ಲ.
ಓದಿ : ಸಿನಿಮಾ ಬಿಡುಗಡೆ: ಹ್ಯಾಟ್ರಿಕ್ ಹೀರೋ ಜತೆ ಮಾತುಕತೆ ನಡೆಸಿದ ಸಲಗ ಚಿತ್ರತಂಡ
ಹರಿಕೃಷ್ಣ ಅವರ ಚಿತ್ರ ಜೀವನವನ್ನು ನೋಡಿದರೆ, ಕಳೆದ 15 ವರ್ಷಗಳಲ್ಲಿ ಪ್ರತೀ ವರ್ಷ ಅವರು ಎಂಟು-ಹತ್ತು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸತತವಾಗಿ ಹಿಟ್ ಹಾಡುಗಳನ್ನು ಕೊಡುತ್ತಾ ಬಂದಿದ್ದಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಅವರು ಸಂಗೀತ ನಿರ್ದೇಶನದಿಂದ ದೂರಾಗಿದ್ದಾರೆ. ಅದಕ್ಕೆ ಕಾರಣ ಏನೆಂದು ಅವರು ಹೇಳಿಕೊಂಡಿಲ್ಲವಾದರೂ, ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದು ಒಂದು ಕಾರಣವಾಗಿರಬಹುದು.
ಯಜಮಾನ ಚಿತ್ರದಲ್ಲೇ ಹರಿಕೃಷ್ಣ ಒನ್ ಆಫ್ ದಿ ನಿರ್ದೇಶಕರಾಗಿದ್ದರು. ಈಗ ದರ್ಶನ್ ಅಭಿನಯದ ಹೊಸ ಚಿತ್ರವನ್ನು ಪೂರ್ಣಪ್ರಮಾಣದಲ್ಲಿ ನಿರ್ದೇಶಿಸುವುದಾಗಿ ಅವರು ಘೋಷಿಸಿದ್ದಾರೆ. ಹೀಗೆ, ಹೊಸ ಚಿತ್ರದ ನಿರ್ದೇಶನದಲ್ಲಿ ತೊಡಗಿಸಿಕೊಂಡಿರುವುದರಿಂದ, ಹರಿಕೃಷ್ಣ ಸಂಗೀತ ನಿರ್ದೇಶನದಿಂದ ದೂರವಿದ್ದಾರೆ ಎಂದು ಹೇಳಲಾಗ್ತಿದೆ.
ಚಿತ್ರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಏನೇ ತೊಡಗಿಸಿಕೊಂಡರೂ, ಹರಿಕೃಷ್ಣ ಇದುವರೆಗೂ ಗುರುತಿಸಿಕೊಂಡಿರುವುದು ತಮ್ಮ ಸಂಗೀತದಿಂದಾಗಿ. ಇದುವರೆಗೆ ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಹರಿಕೃಷ್ಣ, ಮುಂದೆಯೂ ಸಹ ನಿರ್ದೇಶನದ ಜೊತೆ ಜೊತೆಗೆ ಸಂಗೀತ ನಿರ್ದೇಶನದಲ್ಲೂ ತೊಡಗಿಸಿಕೊಳ್ಳುತ್ತಾರಾ ಅಥವಾ ದರ್ಶನ್ ಚಿತ್ರ ಮುಗಿಸುವವರೆಗೂ ಬೇರೆ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವುದಕ್ಕೆ ಬ್ರೇಕ್ ಹಾಕುತ್ತಾರಾ ಎಂದು ಕಾದು ನೋಡಬೇಕಿದೆ.