ಡೈಲಾಗ್ ಕಿಂಗ್ ಸಾಯಿಕುಮಾರ್ ಹೆಸರು ಕೇಳಿದಾಕ್ಷಣ ಕನ್ನಡ ಚಿತ್ರರಂಗದಲ್ಲಿ 'ಪೊಲೀಸ್ ಸ್ಟೋರಿ' ಸಿನಿಮಾ ನೆನಪಾಗುತ್ತೆ. ಈ ಚಿತ್ರದಲ್ಲಿ ಅಗ್ನಿ ಐಪಿಎಸ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸಿದ ಸಾಯಿಕುಮಾರ್ ಅವರು ಕನ್ನಡದ ಆಸ್ತಿ. ಇವರು ಚಿತ್ರರಂಗಕ್ಕೆ ಬಂದು ಮುಂದಿನ ವರ್ಷಕ್ಕೆ 25 ವರ್ಷಗಳು ತುಂಬುತ್ತಿದ್ದು, ಮೊನ್ನೆ ಆಗಸ್ಟ್ 16ಕ್ಕೆ 'ಪೊಲೀಸ್ ಸ್ಟೋರಿ' ಚಿತ್ರ ಬಿಡುಗಡೆ ಆಗಿ 25 ವರ್ಷಗಳು ತುಂಬಿವೆ.
ಅನೇಕ ಸಿನಿಮಾಗಳಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕನ್ನಡ ಸಿನಿಮಾ ಪ್ರೇಕ್ಷಕರ ಮನ ಗೆದ್ದಿರುವ ಸಾಯಿಕುಮಾರ್ರ ಮಾತೃ ಭಾಷೆ ತೆಲುಗು ಆಗಿದ್ದರೂ ಕೂಡ, ಅವರಿಗೆ ಯಶಸ್ಸು, ಗೌರವ, ಕೀರ್ತಿ ಸಿಕ್ಕಿದ್ದು ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದಲ್ಲಿ. ಇದನ್ನೇ ಅವರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರೋ ಸಾಯಿಕುಮಾರ್, 'ಯುವರತ್ನ' ಸಿನಿಮಾ ಬಳಿಕ, 'ಮೇಡ್ ಇನ್ ಬೆಂಗಳೂರು' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಮಾತೃ ಭಾಷೆ ತೆಲುಗು, ಆದರೆ ನಾನು ಕೂ ಮೇಡ್ ಇನ್ ಬೆಂಗಳೂರು. ಈ ಸ್ವರ ಕೊಟ್ಟಿದ್ದು ಅಪ್ಪ, ಸಂಸ್ಕಾರ ಕೊಟ್ಟಿದ್ದು ಅಮ್ಮ, ಅನುಗ್ರಹ ದೇವರದ್ದು, ಅಭಿಮಾನ ನಿಮ್ಮೆಲ್ಲರದೂ ಅಂತಾ ಪಂಚಿಂಗ್ ಡೈಲಾಗ್ ಹೊಡೆದರು.
ಇದನ್ನೂ ಓದಿ: Covid ಸಂಕಷ್ಟ: ಸ್ಯಾಂಡಲ್ವುಡ್ ಕಾರ್ಮಿಕರಿಗೆ ನೆರವಾದ ಸಾಯಿಕುಮಾರ್ ಸಹೋದರರು
ಚಿಕ್ಕಿ ವಯಸ್ಸಿನಲ್ಲೇ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿರೋ ಸಾಯಿಕುಮಾರ್, ಬಾಲ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟ ಅನಂತನಾಗ್ ಹಾಗು ಪ್ರಕಾಶ್ ಬೆಳವಾಡಿಯ ಚಿತ್ರಗಳನ್ನ ನೋಡಿ ಬೆಳೆದಿರೋ ಸಾಯಿಕುಮಾರ್, ಇದೀಗ ಅವರಿಬ್ಬರೊಂದಿಗೆ ಮೇಡ್ ಇನ್ ಬೆಂಗಳೂರು ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ಈ ಚಿತ್ರ ತುಂಬಾ ವಿಶೇಷ ಎಂದು ಹೇಳುತ್ತಾರೆ ಡೈಲಾಗ್ ಕಿಂಗ್.
ತೆಲುಗಿನ 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ ಅನಂತನಾಗ್ರ ನಾರದನ ಪಾತ್ರಕ್ಕೆ ತಾವು ಡಬ್ಬಿಂಗ್ ಮಾಡಿದ ಘಟನೆಯನ್ನ ನೆನಪಿಸಿಕೊಂಡರು. ಅಲ್ಲದೇ ಶಂಕರನಾಗ್ಗೆ ಕೂಡ ತುಂಬಾ ಸಿನಿಮಾಗಳಲ್ಲಿ ವಾಯ್ಸ್ ಕೊಟ್ಟಿದ್ದನ್ನು ಹೇಳಿ ಸಂತಸ ಪಟ್ಟರು.