ಎಷ್ಟೋ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದ ಕಲಾವಿದರು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸುಮಾರು 150 ಚಿತ್ರಗಳಲ್ಲಿ ಪೋಷಕ ಕಲಾವಿದ ಆಗಿ ನಟಿಸಿರುವ ಧರ್ಮ ಕೂಡಾ ಇದೀಗ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
'ಹೇ ರಾಮ್' ಚಿತ್ರದ ಮೂಲಕ ಧರ್ಮ ಮತ್ತೆ ಚಿತ್ರರಂಗಕ್ಕೆ ವಾಪಸಾಗಿದ್ದಾರೆ. ಇದೇ ವರ್ಷ ಫೆಬ್ರವರಿಯಲ್ಲಿ ಧರ್ಮ ಅಭಿನಯದ 'ಅಸುರ ಸಂಹಾರ' ಬಿಡುಗಡೆಯಾಗಿತ್ತು. ಆದರೆ ಈ ಚಿತ್ರದಲ್ಲಿ ಧರ್ಮ ಅಭಿನಯಿಸಿದ್ದು ಕೆಲವು ವರ್ಷಗಳ ಹಿಂದೆ. 'ಇಂತಿ ನಿಮ್ಮ ಆಶಾ ' ಧಾರಾವಾಹಿಯ ಮೂಲಕ ಧರ್ಮ ಕಿರುತೆರೆಯಲ್ಲಿ ಕೂಡಾ ಆ್ಯಕ್ಟಿಂಗ್ ಆರಂಭಿಸಿದ್ದರು.
![Dharma started Second innings](https://etvbharatimages.akamaized.net/etvbharat/prod-images/8325644_453_8325644_1596799659650.png)
ಶಿವರಾಜ್ಕುಮಾರ್ ಅಭಿನಯದ 'ಯುವರಾಜ ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಧರ್ಮ ಅನೇಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹುಚ್ಚ, ಆ ದಿನಗಳು, ಸ್ಲಂ ಬಾಲ, ಮಂಡ್ಯ, ಮನೆ ಮಗಳು, ದರ್ಶನ್, ಆಕಾಶ್, ವಾಲ್ಮೀಕಿ, ಶ್ರೀ ರಾಮ್, ರೌಡಿ ಅಳಿಯ, ಅಣ್ಣ ತಂಗಿ, ಕಾಶಿ, ಮಹಾರಾಜ, ಹುಬ್ಬಳ್ಳಿ, ತಿರುಪತಿ, ತುಂಟ, ಗಣೇಶ, ವೀರ ಮದಕರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಎದೆಗಾರಿಕೆ, ತಿಥಿ, ಜಿಗರ್ಥಂಡ, ರನ್ನ, ಮಾಣಿಕ್ಯ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಧರ್ಮ ಅಭಿನಯಿಸಿದ್ದಾರೆ.
'ಹೇ ರಾಮ್ ' ಸಿನಿಮಾ ಇಂದು ಬೆಂಗಳೂರಿನ ಜೆ.ಪಿ. ನಗರದ ಮನೆಯೊಂದರಲ್ಲಿ ಮುಹೂರ್ತ ಆಚರಿಸಿಕೊಂಡಿದೆ. ಪುರೋಹಿತ್ ಫಿಲ್ಮ್ಸ್ ಬ್ಯಾನರ್ ಅಡಿ ಈ ಸಿನಿಮಾ ಸೆಟ್ಟೇರುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್, ಡಾಲಿ ಧನಂಜಯ್, ಡಾ. ವಿ. ನಾಗೇಂದ್ರ ಪ್ರಸಾದ್ ಸಮ್ಮುಖದಲ್ಲಿ ಮೊದಲ ಶಾಟ್ ಚಿತ್ರೀಕರಣ ಕೂಡಾ ಜರುಗಿದೆ.
ಧರ್ಮ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ 'ಪಾಪ್ಕಾರ್ನ್ ಮಂಕಿಟೈಗರ್' ಚಿತ್ರದ ಸಪ್ತಮಿ ಗೌಡ, ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟ್ಟೂರು. ನವೀನ್ ರಾಜ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಚಿತ್ರವನ್ನು ಪ್ರವೀಣ್ ಬೇಲೂರ್ ನಿರ್ದೇಶಿಸುತ್ತಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಹಾಡುಗಳನ್ನು ಬರೆದು ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಪ್ರದೀಪ್ ವಿ. ಬಂಗಾರ್ಪೇಟ್ ಛಾಯಾಗ್ರಹಣ ಒದಗಿಸುತ್ತಿದ್ದಾರೆ.