'ಡೈರೆಕ್ಟರ್ ಸ್ಪೆಷಲ್' ಚಿತ್ರದ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ಡಾಲಿ ಧನಂಜಯ್, ಸದ್ಯ ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ವ್ಯಾಲ್ಯೂ ಹೊಂದಿರುವ ನಟ. ಸದ್ಯ ಅವರು ರತ್ನನ್ ಪ್ರಪಂಚ, ಬಡವ ರಾಸ್ಕಲ್, ಸಲಗ, ಪುಷ್ಪಾ ಹೀಗೆ ನಾಲ್ಕೈದು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.
ಇದೀಗ ಕೆಆರ್ಜಿ ಸ್ಟುಡಿಯೋಸ್ ಹಾಗೂ ಧನಂಜಯ್ ಒಂದು ದೀರ್ಘಕಾಲಿಕ ಒಪ್ಪಂದಕ್ಕೆ ಸಹಿ ಹಾಕಿದ್ದು, ಅವರಿಬ್ಬರೂ ಜೊತೆಗೂಡಿ ಇನ್ನೂ ಹಲವಾರು ಚಿತ್ರಗಳನ್ನು ಸಾಲು ಸಾಲಾಗಿ ಮಾಡಲಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ಸದ್ಯದಲ್ಲೇ ನೂತನ ಚಿತ್ರಗಳ ಶೀರ್ಷಿಕೆ ಹಾಗೂ ತಾಂತ್ರಿಕವರ್ಗದ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ಕೆಆರ್ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿರುವ, ಡಾಲಿ ಧನಂಜಯ್ ನಾಯಕನಾಗಿ ಅಭಿನಯಿಸಿರುವ "ರತ್ನನ್ ಪ್ರಪಂಚ" ಚಿತ್ರ ಸಹ ಸದ್ಯದಲ್ಲೇ ತೆರೆಗೆ ಬರಲಿದೆ. ರೋಹಿತ್ ಪದಕಿ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಉತ್ತಮ ಮಾತುಗಳು ಕೇಳಿ ಬರುತ್ತಿದೆ.
ಅಜನೀಶ್ ಲೋಕನಾಥ್ ರತ್ನನ್ ಪ್ರಪಂಚಕ್ಕೆ ಉತ್ತಮ ಹಾಡುಗಳನ್ನು ನೀಡಿದ್ದು, ಶ್ರೀಶ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾಲಿಗೆ ನಾಯಕಿಯಾಗಿ ರೆಬಾ ಜಾನ್ ನಟಿಸಿದ್ದಾರೆ. ಉಮಾಶ್ರೀ, ಅನು ಪ್ರಭಾಕರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಒಟ್ಟಿನಲ್ಲಿ ಧನಂಜಯ್ ಅಭಿಮಾನಿಗಳಿಗೆ ಕೆಆರ್ಜಿ ಸ್ಟುಡಿಯೋಸ್ ಭರ್ಜರಿ ರಸದೌತಣ ನೀಡಲು ಸಿದ್ಧವಾಗಿದೆ.
ಇದನ್ನೂ ಓದಿ: ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರ ಯಾವ ನಟನ ಜೊತೆ ಗೊತ್ತಾ?