ರಚಿತಾ ರಾಮ್ ಮತ್ತು ಅಜಯ್ ರಾವ್ ಜೋಡಿಯಾಗಿ ನಟಿಸುತ್ತಿರುವ ‘ಲವ್ ಯೂ ರಚ್ಚು’ ಸಿನಿಮಾ ಚಿತ್ರೀಕರಣದ ವೇಳೆ ಫೈಟರ್ ವಿವೇಕ್ ಸಾವನ್ನಪ್ಪಿ ಒಂದು ವಾರ ಕಳೆದರೂ ಚಿತ್ರತಂಡದಿಂದ ಮೃತನ ಕುಟುಂಬಕ್ಕೆ ಯಾವುದೇ ನೆರವು ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಕಳೆದ 11ನೇ ತಾರೀಖಿನಂದು 'ಲವ್ ಯೂ ರಚ್ಚು' ಚಿತ್ರತಂಡ ಸುದ್ದಿಗೋಷ್ಠಿ ಮಾಡಿ 5 ಲಕ್ಷ ರೂ. ನೆರವು ನೀಡುವುದಾಗಿ ಹೇಳಿತ್ತು. ಆದರೆ, ಇದುವರೆಗೂ ಚಿತ್ರತಂಡದವರು ಯಾವುದೇ ನೆರವು ನೀಡಿಲ್ಲ ಎಂದು ಮೃತನ ತಾಯಿ ಉಮಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ನನ್ನ ಮಗನಿಗಾದ ಗತಿ ಯಾರಿಗೂ ಬರಬಾರದು, ವಿವೇಕ್ ಸಾವಿಗೆ ನ್ಯಾಯ ಸಿಗಬೇಕು ಅಂತ ಫಿಲ್ಮ್ ಚೇಂಬರ್ನಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ನಿರ್ಮಾಪಕರ ಸಂಘ ಕೂಡ ನಮಗೆ ನೆರವು ಕೊಡಿಸುವ ಭರವಸೆ ನೀಡಿದ್ದಾರೆ. ಆದರೆ ಚಿತ್ರತಂಡದಿಂದ ಇಲ್ಲಿವರೆಗೂ ಯಾವುದೇ ಸಹಾಯವಾಗಿಲ್ಲ ಎಂದು ಉಮಾ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 9ರಂದು ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ 'ಲವ್ ಯೂ ರಚ್ಚು' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಜೆಸಿಬಿಗೆ ರೋಪ್ ಕಟ್ಟಿ ಎಳೆಯುವಾಗ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ 28 ವರ್ಷದ ವಿವೇಕ್ ಸಾವನ್ನಪ್ಪಿದರು. ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಶಂಕರ್ ರಾಜ್, ಸಾಹಸ ನಿರ್ದೇಶಕ ವಿನೋದ್ ಕುಮಾರ್ ಹಾಗೂ ಕ್ರೇನ್ ಅಪರೇಟರ್ಗೆ ರಾಮನಗರ ಹೆಚ್ಚುವರಿ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.