ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಸದ್ದು ಮಾಡುತ್ತಿರುವ ಹೆಸರು ಮಂಡ್ಯದ ಕಾಮೇಗೌಡ ಅವರದ್ದು. ಇವರು ಕೆರೆ ಕಾಮೇಗೌಡ ಎಂದೇ ಹೆಸರಾದವರು. ಕುರಿ ಮೇಯಿಸುತ್ತಲೇ ಪ್ರಾಣಿ, ಪಕ್ಷಿಗಳ ನೀರಿನ ದಾಹ ತಣಿಸಲು ಹಲವಾರು ಕೆರೆಗಳನ್ನು ನಿರ್ಮಿಸಿದ ಮಹಾನುಭಾವರು.
ಇನ್ನು ಯಾವುದೇ ವಿಶೇಷ ವ್ಯಕ್ತಿಗಳ ಹೆಸರು ಕೇಳುತ್ತಿದ್ದಂತೆ ಅವರ ಬಗ್ಗೆ ಲೇಖನಗಳು, ಸಿನಿಮಾಗಳು, ಸಂದರ್ಶನಗಳು ಹೊರಬರುವುದು ಸಾಮಾನ್ಯ. ಇದೀಗ ನಿರ್ದೇಶಕ ದಯಾಳ್ ಪದ್ಮನಾಭನ್ ಕೂಡಾ ಕಾಮೇಗೌಡ ಅವರ ಖ್ಯಾತಿಯನ್ನು ಜನರಿಗೆ ಮತ್ತಷ್ಟು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ವಿಚಾರಗಳ ಬಗ್ಗೆ ಸಿನಿಮಾ ಮಾಡುವುದರಲ್ಲಿ ದಯಾಳ್ ಪದ್ಮನಾಭನ್ ಯಾವಾಗಲೂ ಮುಂದೆ ಬರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಭಗೀರಥ ಕಾಮೇಗೌಡ ಅವರನ್ನು ತಮ್ಮ 'ಮನ್ ಕಿ ಬಾತ್'ಕಾರ್ಯಕ್ರಮದಲ್ಲಿ ದೇಶಕ್ಕೆ ಪರಿಚಯಿಸಿದ ನಂತರ ಕಾಮೇಗೌಡ ಅವರ ಮೌಲ್ಯ ಏನು ಎಂಬುದು ಎಲ್ಲರಿಗೂ ತಿಳಿಯಿತು.
ರಾಷ್ಟ್ರ ವ್ಯಾಪಿ ಹರಡಿರುವ ಕಾಮೇಗೌಡ ಅವರ ಸಾಮರ್ಥ್ಯದ ಬಗ್ಗೆ ದಯಾಳ್ ಪದ್ಮನಾಭನ್ ಡಾಕ್ಯುಮೆಂಟರಿ ಮಾಡಲು ಚಿತ್ರಕಥೆ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕಾಮೇಗೌಡ ಅವರ ಒಂದು ಸ್ಕೆಚ್ ಮಾಡಿಸಿ ಬಿಡುಗಡೆ ಕೂಡಾ ಮಾಡಿದ್ದಾರೆ. ಆದರೆ ಈ ಸಾಕ್ಷ್ಯಚಿತ್ರಕ್ಕೆ ದಯಾಳ್ 'ದಿ ಗುಡ್ ಶೆಪರ್ಡ್' ಎಂದು ಹೆಸರಿಟ್ಟಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ಕಾಮೇಗೌಡ ಅವರ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕೆಂಬ ಉದ್ಧೇಶದಿಂದ ಇಂಗ್ಲೀಷ್ನಲ್ಲಿ ಸಾಕ್ಷ್ಯಚಿತ್ರ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಈಗಾಗಲೇ ಕಾಮೇಗೌಡ ಅವರೊಂದಿಗೆ ದಯಾಳ್ ಮಾತುಕತೆ ನಡೆಸಿದ್ದಾರಂತೆ. ಜುಲೈ ಮಧ್ಯಭಾಗದಲ್ಲಿ ಈ ಡಾಕ್ಯುಮೆಂಟರಿ ಕೆಲಸಗಳು ಆರಂಭವಾಗಲಿದ್ದು ಇದು 20 ನಿಮಿಷಗಳ ಅವಧಿಯದ್ದಾಗಿದೆ ಎಂದು ದಯಾಳ್ ಪದ್ಮನಾಭನ್ ಹೇಳಿದ್ದಾರೆ.