ಕನ್ನಡದ ಹಳೆಯ ಜನಪ್ರಿಯ ಸಿನಿಮಾಗಳ ಶಿರ್ಷಿಕೆಗಳನ್ನು ಇಂದಿನ ಸಿನಿಮಾಗಳಿಗೆ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮರು ಚಿಂತನೆ ನಡೆಸುತ್ತಿದೆ ಎಂಬುದು ತಿಳಿದ ವಿಚಾರ. ನಾಗರಹಾವು, ಯಜಮಾನ, ರಾಮಾಚಾರಿ, ಚಕ್ರವ್ಯೂಹ ಹಾಗೂ ಇನ್ನಿತರ ಸಿನಿಮಾ ಹೆಸರುಗಳೇ ಇದಕ್ಕೆ ಸಾಕ್ಷಿ.
ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳ ಹೆಸರನ್ನು ಮತ್ತೆ ನೀಡಬೇಕೋ ಬೇಡವೋ ಎಂದು ವಾಣಿಜ್ಯ ಮಂಡಳಿ ಶಿರ್ಷಿಕೆ ಕಮಿಟಿ ಯೋಚಿಸುತ್ತಿರುವಾಗಲೇ ಪುಟ್ಟಣ್ಣ ಕಣಗಾಲ್ ಅವರ ಜನಪ್ರಿಯ ಸಿನಿಮಾ ‘ರಂಗನಾಯಕಿ’ ಚಿತ್ರದ ಶಿರ್ಷಿಕೆಯನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಮುಂದಿನ ಸಿನಿಮಾಕ್ಕೆ ಇಟ್ಟುಕೊಂಡಿದ್ದಾರೆ. ದಯಾಳ್ ಈ ಹಿಂದೆ ‘ಸತ್ಯ ಹರಿಶ್ಚಂದ್ರ’ ಎಂಬ ಶಿರ್ಷಿಕೆ ಕೂಡಾ ಇಟ್ಟುಕೊಂಡು ಸಿನಿಮಾ ಮಾಡಿದ್ದರು. ದಯಾಳ್ ಅವರ ‘ರಂಗನಾಯಕಿ’ ಗೂ 1981 ರ ಪುಟ್ಟಣ್ಣ ಅವರ ‘ರಂಗನಾಯಕಿ’ ಗೂ ಸಂಭಂಧವಿಲ್ಲ ಎನ್ನುತ್ತಾರೆ ದಯಾಳ್.
ಎಪ್ರಿಲ್ 19 ರಂದು ‘ತ್ರಯಂಬಕಮ್’ ಬಿಡುಗಡೆ ಆಗುತ್ತಿದ್ದು ನಂತರ ದಯಾಳ್ ಪದ್ಮನಾಭನ್ ‘ರಂಗನಾಯಕಿ’ ಸಿನಿಮಾ ಆರಂಭಿಸುತ್ತಿದ್ದಾರೆ. ಇನ್ನು ರಂಗನಾಯಕಿಯಾಗಿ ‘ಧೈರ್ಯಮ್‘ ಮತ್ತು ‘ಬಜಾರ್’ ಚಿತ್ರದ ನಾಯಕಿ ಅದಿತಿ ಪ್ರಭುದೇವ ಅವರು ಆಯ್ಕೆಯಾಗಿದ್ದಾರೆ. ನಟ ನಿರ್ದೇಶಕ ಎಂ.ಜಿ ಶ್ರೀನಿವಾಸ್, ಪದ್ಮಾವತಿ ಧಾರಾವಾಹಿ ನಟ ತ್ರಿವಿಕ್ರಮ್ ತಾರಾಗಣದಲ್ಲಿದ್ದಾರೆ. ಮಣಿಕಾಂತ್ ಖದ್ರಿ ಸಂಗೀತ, ರಾಕೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಎಪ್ರಿಲ್ 29 ರಂದು ‘ರಂಗನಾಯಕಿ’ ಸಿನಿಮಾಗೆ ಮುಹೂರ್ತ ನೆರವೇರುತ್ತಿದೆ.