ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ. ವಾಸು ಜೋಡಿಯಲ್ಲಿ ಬರುತ್ತಿರುವ ಹೊಸ ಸಿನಿಮಾ 'ಆಯುಷ್ಮಾನ್ಭವ'. ಈ ಮೊದಲು ಚಿತ್ರವನ್ನು ನವೆಂಬರ್ 1 ರಂದು ಬಿಡುಗಡೆ ಮಾಡುವುದಾಗಿ ನಿರ್ಧಾರವಾಗಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.
ಇದೀಗ ಶಿವಸೈನ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್. 'ಆಯುಷ್ಮಾನ್ಭವ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು ಇದೇ ನವೆಂಬರ್ 15 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಶಿವರಾಜ್ಕುಮಾರ್ಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಅನಂತ್ನಾಗ್, ನಿಧಿಸುಬ್ಬಯ್ಯ, ಸುಹಾಸಿನಿ, ಶಿವಾಜಿಪ್ರಭು, ಸಾಧುಕೋಕಿಲ, ರಂಗಾಯಣ ರಘು, ಯಶ್ ಶೆಟ್ಟಿ ಹೀಗೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ.
ಕರ್ನಾಟಕದ ಕುಳ್ಳ ಎಂದೇ ಖ್ಯಾತರಾದ ದ್ವಾರಕೀಶ್ ಚಿತ್ರ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗಿದೆ. ಬೆಂಗಳೂರು, ಗೌರಿಬಿದನೂರು, ಅಲೆಪ್ಪಿ, ಚಾಲ್‍ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ನಿರ್ದೇಶಕ ವಿ.ವಾಸು ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರದ ಹಾಡುಗಳಿಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಗೌತಮ್‍ರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಎ.ಹರ್ಷ ನೃತ್ಯ ನಿರ್ದೇಶನ ಇದೆ. 'ಶಿವಲಿಂಗ' ಚಿತ್ರದಂತೆ ಶಿವಣ್ಣ ಹಾಗೂ ಪಿ. ವಾಸು ಕಾಂಬಿನೇಷನ್ ಮೋಡಿ ಮಾಡುತ್ತಾ ಕಾದು ನೋಡಬೇಕು.