ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟಾರ್ ನಟನಾಗಿದ್ದರೂ ಸರಳ ಸ್ವಭಾವದ ವ್ಯಕ್ತಿ. ಸಾಮಾಜಿಕ ಕಳಕಳಿ, ಪ್ರಾಣಿ-ಪಕ್ಷಿಗಳನ್ನು ಇಷ್ಟಪಡುವ ಗುಣ ಹೊಂದಿರುವ ದರ್ಶನ್ ತಮ್ಮ ಸರಳ ಸ್ವಭಾವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದರ್ಶನ್ ಅವರ ಪ್ರಾಣಿಪ್ರೇಮದಿಂದಲೇ ಸರ್ಕಾರ ಅವರನ್ನು ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ನೇಮಿಸಿತ್ತು. ಇದೀಗ ಅವರು ಕೃಷಿ ರಾಯಭಾರಿಯಾಗಿದ್ದಾರೆ.
ದರ್ಶನ್ ತಮ್ಮ ಮೈಸೂರಿನ ಫಾರ್ಮ್ಹೌಸ್ನಲ್ಲಿ ಹಸು, ಕುದುರೆ, ಎತ್ತು, ಕುರಿ, ಮೇಕೆ ಸೇರಿದಂತೆ ಹಲವಾರು ತಳಿಯ ಪ್ರಾಣಿ ಪಕ್ಷಿಗಳನ್ನು ಸಾಕುವುದರೊಂದಿಗೆ ಕೃಷಿಯನ್ನೂ ಮಾಡುತ್ತಿದ್ದಾರೆ. ಹೀಗಾಗಿ ದರ್ಶನ್ ಅವರನ್ನು ಕೃಷಿ ಇಲಾಖೆ ರಾಯಭಾರಿಯನ್ನಾಗಿ ಮಾಡಿದೆ. ನಿನ್ನೆ ಮೈಸೂರಿನ ದರ್ಶನ್ ಫಾರ್ಮ್ಹೌಸ್ಗೆ ಭೇಟಿ ನೀಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ದರ್ಶನ್ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದು, "ದರ್ಶನ್ ಕೂಡಾ ಕೃಷಿ ಇಲಾಖೆ ರಾಯಭಾರಿ ಆಗಲು ತುಂಬಿದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ದರ್ಶನ್ ಮೊದಲಿನಿಂದಲೂ ಕೃಷಿ ಮತ್ತು ರೈತರ ಪರವಾಗಿ ಧ್ವನಿ ಎತ್ತುವ ನಟ. ಕೃಷಿ ಕೆಲಸಗಳ ಬಗ್ಗೆ ಹೆಚ್ಚು ಆಸ್ತಕಿ ಹೊಂದಿರುವ ದರ್ಶನ್, ನಾನೂ ಕೂಡಾ ರೈತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಇದಕ್ಕೆ ಯಾವುದೇ ಸಂಭಾವನೆ ಬೇಡ, ನಾನು ರೈತರ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ದರ್ಶನ್ ಒಪ್ಪಿಕೊಂಡಿದ್ದಾರೆ" ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ದರ್ಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಡೆನ್ವರ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಿಚ್ಚ ಸುದೀಪ್ ಆಯ್ಕೆ
ಸರ್ಕಾರ ರೂಪಿಸಿಕೊಂಡಿರುವ ಕೃಷಿ ಇಲಾಖೆ ಹಾಗೂ ರೈತ ಪರ ಕಾರ್ಯಕ್ರಮಗಳಿಗೆ ದರ್ಶನ್ ಪ್ರಚಾರ ಮಾಡಲಿದ್ದಾರೆ. ರೈತರಿಗೆ ಉತ್ಸಾಹ, ತುಂಬುವ ಕಾರ್ಯಕ್ರಮಗಳಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಗಳನ್ನು ದರ್ಶನ್ ರೈತರೊಂದಿಗೆ ಸಂವಾದ ಮಾಡಲಿದ್ದಾರೆ. ಸಿನಿಮಾ ಜೊತೆಗೆ ಕೃಷಿ ಮತ್ತು ಪಶುಸಂಗೋಪನೆ ಬಗ್ಗೆ ಅಪಾರ ಆಸಕ್ತಿ ಮತ್ತು ರೈತರ ಬಗ್ಗೆ ಗೌರವ ಇರುವುದರಿಂದಲೇ ದರ್ಶನ್ ಅವರನ್ನು ಕೃಷಿ ಇಲಾಖೆ ರಾಯಭಾರಿ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.