ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಅವರ ಅಭಿಮಾನಿ ಬಳಗಕ್ಕೆ ಇನ್ನಿಲ್ಲದ ಪ್ರೀತಿ. ಅದೇ ರೀತಿ ಅಭಿಮಾನಿಗಳೆಂದರೆ ಈ ಯಜಮಾನನಿಗೂ ಕೂಡಾ ಅಷ್ಟೇ ಅಕ್ಕರೆ. ತನ್ನನ್ನು ನೋಡಲು ಬಂದವರನ್ನು ದರ್ಶನ್ ಮಾತನಾಡದೇ ವಾಪಸ್ ಕಳಿಸಿರುವ ಉದಾಹರಣೆ ಇಲ್ಲ.
ಇತ್ತೀಚೆಗೆ ನಟ ದರ್ಶನ್ ಪುಟ್ಟ ಅಭಿಮಾನಿಯೊಬ್ಬರನ್ನು ಭೇಟಿ ಆಗಿದ್ದರು. ಈ ಬಾಲಕ ತನ್ನ ಮೆಚ್ಚಿನ ನಟನನ್ನು ನೋಡಿ ತನ್ನ ಆಸೆ ತೀರಿದ ಮೇಲೆ ಕೊನೆಯುಸಿರೆಳೆದಿದ್ದಾನೆ. ಪುಟಾಣಿ ಅಭಿಮಾನಿಯನ್ನು ದರ್ಶನ್ 'ರಾಬರ್ಟ್' ಸೆಟ್ನಲ್ಲಿ ಭೇಟಿ ಮಾಡಿದ್ದರು. ಈ ಅಭಿಮಾನಿ ಹೆಸರು ಕೀರ್ತಿರಾಜ್, ದರ್ಶನ್ರ ಪಕ್ಕಾ ಅಭಿಮಾನಿ. ಕೀರ್ತಿರಾಜ್ ಮೂಲತಃ ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಯಡಹಳ್ಳಿಯವನು. ಈತ 5 ವರ್ಷದವನಾಗಿರುವಾಗಲೇ ಬ್ಯಾಕ್ಬೋನ್ನಲ್ಲಿ ನೀರು ತುಂಬಿಕೊಂಡಿತ್ತು. ಪೋಷಕರು ಈತನನ್ನು ಉಳಿಸಿಕೊಳ್ಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದ್ದ ಬದ್ದ ಜಮೀನನ್ನೂ ಮಾರಾಟ ಮಾಡಿದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಈತನ ಬದುಕು ಮತ್ತಷ್ಟು ನರಕಮಯವಾಗಿತ್ತು. ಎದ್ದು ಓಡಾಡಲೂ ಆಗದಷ್ಟು ಕಷ್ಟವಾಗಿತ್ತು. ಈತನ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು.
ಈ ಪುಟ್ಟ ಅಭಿಮಾನಿ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ಹಂಬಲ ವ್ಯಕ್ತಪಡಿಸಿದ್ದ. ಬಾಲಕನ ಆಸೆಯಂತೆ ಆತನನ್ನು ದರ್ಶನ್ ಭೇಟಿ ಮಾಡಿ ಚಾಕೊಲೇಟ್ ನೀಡಿ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಜೊತೆಗೆ ಪೋಷಕರಿಗೂ ಧೈರ್ಯ ಹೇಳಿದ್ದರು ದರ್ಶನ್. ದುರಂತವೆಂದರೆ ದರ್ಶನ್ ಭೇಟಿ ಮಾಡಿದ 3-4 ದಿನಗಳಲ್ಲೇ ಕೀರ್ತಿರಾಜ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಪುಟಾಣಿ ಅಭಿಮಾನಿಯ ಸಾವಿಗೆ ದರ್ಶನ್ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.