ಈ ಹಿಂದೆ ಧಾರವಾಡದಿಂದ ಅಭಿಮಾನಿಯೊಬ್ಬರು ಪುನೀತ್ ಸಮಾಧಿವರೆಗೆ ಕಾಲ್ನಡಿಗೆ ಯಾತ್ರೆ ಮಾಡಿದರು. ಇದೀಗ ಗುರುಪ್ರಸಾದ್ ಎಂಬ ಪುನೀತ್ ಅಭಿಮಾನಿಯೊಬ್ಬರು, ಹಿಮಾಲಯದಿಂದ ಅಪ್ಪು ಸಮಾಧಿವರೆಗೆ ಸೈಕಲ್ ಯಾತ್ರೆ ಮಾಡಿದ್ದಾರೆ.
ಸುಮಾರು 3,300 ಕಿಲೋಮೀಟರ್, ಸೈಕಲ್ ಸವಾರಿಯನ್ನು ಅಪ್ಪು ಅಭಿಮಾನಿ ಗುರುಪ್ರಸಾದ್ ಮಾಡಿದ್ದಾರೆ. ಇಂದು ಅವರು ಕಂಠೀರವ ಸ್ಟುಡಿಯೋದಲ್ಲಿರೋ ಅಪ್ಪು ಸಮಾಧಿಗೆ ಬಂದು ತಲುಪಿದ್ದಾರೆ. ಡಿಸೆಂಬರ್ 10 ರಂದು ಹಿಮಾಲಯದಿಂದ ಸೈಕಲ್ ಯಾತ್ರೆ ಪ್ರಾರಂಭಿಸಿದ ಗುರುಪ್ರಸಾದ್, ಬರೋಬ್ಬರಿ 42 ದಿನಗಳ ನಂತರ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಗುರುಪ್ರಸಾದ್, ಅಪ್ಪು ಅವರ ಮೇಲಿನ ಅಭಿಮಾನಕ್ಕೆ 3,300 ಕಿ.ಮೀ ಸೈಕಲ್ ಯಾತ್ರೆ ಮಾಡಿದ್ದೇನೆ. ಸಾಕಷ್ಟು ಜಾಗಗಳಲ್ಲಿ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿದ್ದೇನೆ. ಅಪ್ಪು ಅವರು ಲವ್ ಮ್ಯಾರೇಜ್ ಆಗಿದ್ದ ಕಾರಣ ತಾಜ್ ಮಹಲ್ಗೂ ಹೋಗಿ ಬಂದಿರುವೆ. ಯಾತ್ರೆಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದೆ. ಆದ್ರೂ ಎದೆಗುಂದದೆ ಯಾತ್ರೆ ಪೂರ್ಣ ಮಾಡಿದ್ದೀನಿ. ಅಪ್ಪು ಸರ್ ಆತ್ಮಕ್ಕೆ ಶಾಂತಿ ಸಿಗಲಿ ಅನ್ನೋ ಕಾರಣಕ್ಕೆ ಯಾತ್ರೆ ಮಾಡಿದ್ದೇನೆ. ನಾನು ಅರ್ಥಿಕವಾಗಿ ಸದೃಢವಾಗಿಲ್ಲ. ಯಾರಾದ್ರು ದಾನಿಗಳು ಹಣದ ನೆರವು ನೀಡಿದ್ರೆ ಬೈಕ್ ಯಾತ್ರೆ ಮಾಡ್ತಿನಿ. ಅಪ್ಪು ಸರ್ ಅವರಿಗೆ 46 ವರ್ಷ ಆಗಿದ್ದ ಕಾರಣ 46 ಸಾವಿರ ಕಿಲೋಮೀಟರ್ ಪೂರೈಸೊ ಆಸೆ ಇದೆ ಎಂದರು. ಈ ಅಭಿಮಾನಿಯನ್ನ ರಾಘವೇಂದ್ರ ರಾಜ್ ಕುಮಾರ್, ಅವರ ಮಗ ಯುವರಾಜ್ ಕುಮಾರ್ ಬರಮಾಡಿಕೊಂಡು. ಅಲ್ಲದೇ ಏಲಕ್ಕಿ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿ ಗೌರವಿಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಪ್ರಥಮ್ ಅಭಿನಯದ ನಟ ಭಯಂಕರ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಸಿಎಂ
ಬಳಿಕ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಈ ದೃಶ್ಯದಲ್ಲಿ ನನ್ನ ತೋರಿಸಲೇಬೇಡಿ. ಅಪ್ಪು ಅವ್ರನ್ನ ಮನೆಯವ್ರು ಜಾಸ್ತಿ ಪ್ರೀತಿಸುತ್ತಾರಾ ಅಥವಾ ಅಭಿಮಾನಿಗಳು ಜಾಸ್ತಿ ಪ್ರೀತಿಸುತ್ತಾರಾ ಗೊತ್ತಿಲ್ಲ. ಅವ್ರಲ್ಲಿ ನನ್ನ ತಮ್ಮನ್ನ ಕಾಣ್ತಾ ಇದ್ದೀನಿ. ಅಪ್ಪು ನಮ್ಮ ತಮ್ಮನಾಗಿ ಹುಟ್ಟಿದ ಅಷ್ಟೇ, ಅಭಿಮಾನಿಗಳಿಗೆ ಪ್ರಾಣ. ಹಿಮಾಚಲ ಪ್ರದೇಶದಿಂದ ನಾವು ಕಾರಿನಲ್ಲಿ ಬರೋಕೆ ಆಗಲ್ಲ. ಅಪ್ಪಾಜಿ ಅಭಿಮಾನಿಗಳೇ ದೇವರು ಅಂದ್ರು, ಆದ್ರೆ ಅಭಿಮಾನಿಗಳು ಅವ್ರ ಮಗನನ್ನೇ ದೇವರು ಅಂತಿದ್ದಾರೆ. ಸೈಕ್ಲಿಂಗ್ ಮಾಡಿದವರಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು ಅಂತ ಅನಿಸುತ್ತಿದೆ. ನಾವ್ ಇರೋವರೆಗೂ ಆರೋಗ್ಯವಾಗಿರಬೇಕು ಎನ್ನುವುದು ಅಪ್ಪು ಪಾಲಿಸಿಯಾಗಿತ್ತು. ಯಾರೂ 3000 ಸಾವಿರ ಕಿ.ಮೀ ಸೈಕ್ಲಿಂಗ್ ಮಾಡಿದ್ರು ಅಂದ್ರೆ ನಂಬೋದಿಲ್ಲ. ನನ್ನ ತಮ್ಮನಿಗೋಸ್ಕರ ಇನ್ನೊಬ್ಬ ತಮ್ಮ ಬಂದಿದ್ದಾನೆ ಎಂದು ಹೇಳುತ್ತಾ ರಾಘವೇಂದ್ರ ರಾಜ್ ಕುಮಾರ್ ಭಾವುಕರಾದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ