ಐಪಿಎಲ್ ಕ್ರಿಕೆಟ್ ಒಂದು ಆಟ ಆಗಿ ಉಳಿಯದೇ, ವ್ಯಾಪಾರೀಕರಣ ಆಗಿರೋದು ಗೊತ್ತಿರುವ ವಿಷಯ. ಪ್ರತಿ ಐಪಿಎಲ್ ಕ್ರಿಕೆಟ್ ಮ್ಯಾಚ್ ನಡೆದಾಗ, ಕೋಟಿ ಕೋಟಿ ಬೆಟ್ಟಿಂಗ್ ನಡೆದು, ವರ್ಷಕ್ಕೆ 200ಕ್ಕೂ ಹೆಚ್ಚು ಜನ ಈ ಬೆಟ್ಟಿಂಗ್ ಆಸೆಗೆ ಬಿದ್ದು, ಪ್ರಾಣ ಕಳೆದುಕೊಳ್ಳುವುದರ ಜೊತೆಗೆ, ದೇಶ ಬಿಟ್ಟಿರುವ ಉದಾಹರಣೆಗಳು ಇವೆ. ಈಗ ಈ ಐಪಿಎಲ್ ಬೆಟ್ಟಿಂಗ್ ಬಗ್ಗೆ ಹೇಳೋದಿಕ್ಕೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ, ನಿರ್ದೇಶಕ ಕುಮಾರ್ ಹಾಗು ನಟ ತಬಲ ನಾಣಿ ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಮೂಲಕ ಬರ್ತಾ ಇದ್ದಾರೆ.
ಸದ್ಯ ಕ್ರಿಟಿಕಲ್ ಕೀರ್ತನೆಗಳು ಸಿನಿಮಾದ ಆಫೀಶಿಯಲ್ ಟ್ರೈಲರ್ ಬಿಡುಗಡೆ ಆಗಿದ್ದು, ಈ ಸಿನಿಮಾ ಬಗ್ಗೆ ಮಾತನಾಡೋದಿಕ್ಕೆ ನಿರ್ದೇಶಕ ಕುಮಾರ್, ನಟ ತಬಲಾ ನಾಣಿ, ಹಿರಿಯ ನಟ ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ನಾಯಕಿಯರಾದ ಅಪೂರ್ವ ಭಾರದ್ವಾಜ್, ದೀಪಾ ಜಗದೀಶ್ ಹಾಗು ಬಾಲ ನಟರಾದ ಪುಟ್ಟರಾಜ್, ಮಹೇಂದ್ರ ತಮ್ಮ ಚಿತ್ರದ ವಿಶೇಷತೆ ಬಗ್ಗೆ ಹಂಚಿಕೊಂಡರು.
ನಿರ್ದೇಶಕ ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶಿವಸೇನ ಮತ್ತು ಶಿವಶಂಕರ್ ಛಾಯಾಗ್ರಹಣ, ವೀರ ಸಮರ್ಥ ಸಂಗೀತ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿಯಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಐಪಿಎಲ್ ಬೆಟ್ಟಿಂಗ್ ವಿಚಾರವನ್ನು ಈ ಸಿನಿಮಾದಲ್ಲಿ ಹಾಸ್ಯಮಯವಾಗಿ ಹೇಳಲು ಪ್ರಯತ್ನಿಸಲಾಗಿದೆ.
ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಟ್ರೈಲರ್ ನಿಂದ ಗಮನ ಸೆಳೆಯುತ್ತಿರೋ ಕ್ರಿಟಿಕಲ್ ಕೀರ್ತನೆಗಳು ಚಿತ್ರವನ್ನ ಈಗಾಗಲೇ ಸಾಕಷ್ಟು ಜನ ವಿತರಕರು ರಿಲೀಸ್ ಮಾಡಲು ಮುಂದೆ ಬಂದಿರೋದು, ಚಿತ್ರತಂಡಕ್ಕೆ ಧೈರ್ಯ ಬಂದಿದೆ.
ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣ ಮಾಡಿರುವ, ಕ್ರಿಟಿಕಲ್ ಕೀರ್ತನೆಗಳು ಚಿತ್ರವನ್ನ ಈ ವರ್ಷದ ಐಪಿಎಲ್ ಕ್ರಿಕೆಟ್ ಮ್ಯಾಚ್ ಆರಂಭವಾಗುವುದಿಕ್ಕಿಂತ ಮುಂಚೆ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.