ಕನ್ನಡ ಚಿತ್ರರಂಗದಲ್ಲಿ ಹಲವು ಸ್ಟಾರ್ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಅಕೌಂಟ್ ಹೊಂದಿದ್ದಾರೆ. ಅದರ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಯಾವಾಗಲೂ ಟಚ್ನಲ್ಲಿ ಇರುತ್ತಾರೆ. ರವಿಚಂದ್ರನ್ ಅವರದ್ದು ಸಹ ಟ್ವಿಟರ್ ಸೇರಿದಂತೆ ಕೆಲವು ಬೇರೆ ವೇದಿಕೆಗಳಲ್ಲಿ ಖಾತೆಗಳಿವೆಯಾದರೂ, ಅದು ಅವರದ್ದಲ್ಲ, ಅವರ ಹೆಸರಿನಲ್ಲಿ ಅಭಿಮಾನಿಗಳು ಹ್ಯಾಂಡಲ್ ಮಾಡುತ್ತಾರೆ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಇದೀಗ ರವಿಚಂದ್ರನ್ ಅವರು ಕೊನೆಗೂ ಸೋಷಿಯಲ್ ಮೀಡಿಯಾಗೆ ದೊಡ್ಡ ರೀತಿಯಲ್ಲಿ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಒನ್ಆಂಡ್ಓನ್ಲಿ ಎಂಬ ಆಪ್ ಜೊತೆಗೆ ಅವರು ಅದೇ ಹೆಸರಿನಲ್ಲಿ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂನಲ್ಲೂ ಎಂಟ್ರಿ ಕೊಟ್ಟು, ಮುಂದಿನ ದಿನಗಳಲ್ಲಿ ಸಕ್ರಿಯವಾಗಿರಲಿದ್ದಾರಂತೆ. ಮುಂದಿನ ದಿನಗಳಲ್ಲಿ ತಮ್ಮ ವೃತ್ತಿಬದುಕಿನ ಹಲವು ವಿಷಯಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುವ ಯೋಚನೆ ಅವರಿಗಿದೆ.
ಆದರೆ, ರವಿಚಂದ್ರನ್ ಯಾವಾಗ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತಾರೆ ಎಂಬ ಪ್ರಶ್ನೆ ಸಹಜ. ಅದಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ ವಾರ ಯುಗಾದಿ ಹಬ್ಬದಂದು, ರವಿಚಂದ್ರನ್ ಅವರು ತಮ್ಮದೇ ಆ್ಯಪ್ ಬಿಡುಗಡೆ ಮಾಡುವುದರ ಜೊತೆಗೆ, ಸೋಷಿಯಲ್ ಮೀಡಿಯಾಗೂ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಅವರು ಸಣ್ಣಸಣ್ಣ ವಿಡಿಯೋಗಳ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದು, ಯುಗಾದಿ ಹಬ್ಬದಂದು ಗ್ರಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ.
ರವಿಚಂದ್ರನ್ ಅವರ ಈ ನಿರ್ಧಾರ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಸಂತೋಷ ಮೂಡಿಸಿದ್ದು, ಕ್ರೇಜಿಸ್ಟಾರ್ ಮುಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಏನೆಲ್ಲ ಹಂಚಿಕೊಳ್ಳಬಹುದು ಎಂದು ಕುತೂಹಲದಿಂದ ಎಲ್ಲರೂ ಕಾಯುತ್ತಿದ್ದಾರೆ.