ಲಾಕ್ಡೌನ್ಯಿಂದಾಗಿ ದೇಶವೇ ಆರ್ಥಿಕ ವ್ಯವಸ್ಥೆಯಿಂದ ಕುಗ್ಗಿ ಹೋಗಿದೆ. ಅದರಲ್ಲಿ ಚಿತ್ರರಂಗ ಕೂಡ ಹೊರತಾಗಿಲ್ಲ. ಸತತ ಏಳು ತಿಂಗಳು ಸಿನಿಮಾ ಶೂಟಿಂಗ್, ಪ್ರದರ್ಶನ, ಯಾವುದೇ ವ್ಯವಹಾರ ಇಲ್ಲದೆ ಸಿನಿಮಾ ರಂಗಕ್ಕೆ ಆರ್ಥಿಕ ಕುಸಿತ ದೊಡ್ಡ ಮಟ್ಟದಲ್ಲಿಯೇ ಆಗಿದೆ. ಅದರಲ್ಲಿ ಕನ್ನಡ ಚಿತ್ರರಂಗ ಕೂಡ ಒಂದು.
ಸಿನಿಮಾ ಚಿತ್ರೀಕರಣ, ಚಿತ್ರಮಂದಿರಗಳು ಬಂದ್, ಸಿನಿಮಾ ಕಾರ್ಮಿಕರು ಕೆಲಸವಿಲ್ಲದೇ ಸಾಕಷ್ಟು ಸಂಕಷ್ಟಕ್ಕೆ ಸಿಲಿಕಿದ್ದು ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ. ಅನ್ಲಾಕ್ ನಂತರ ಸಿನಿಮಾ ಶೂಟಿಂಗ್, ಸಿನಿಮಾ ಪ್ರದರ್ಶನ, ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಆದರೆ ಲಾಕ್ಡೌನ್ನಿಂದ ಕನ್ನಡ ಚಿತ್ರರಂಗಕ್ಕೆ ಉಂಟಾದ ನಷ್ಟವೆಷ್ಟು? ಕನ್ನಡ ಚಿತ್ರರಂಗದಿಂದ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತಿದ್ದ ಆದಾಯ ಎಷ್ಟು? ಈ ಲಾಕ್ಡೌನ್ನಿಂದಾಗಿ ಕನ್ನಡ ಚಿತ್ರಮಂದಿರಗಳ ಮಾಲೀಕರಿಗಾದ ನಷ್ಟವೆಷ್ಟು ಎಂಬುದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.
ಚಿತ್ರರಂಗ ಚೇತರಿಸಿಕೊಳ್ಳಲು ಕನಿಷ್ಠ ಎರಡು ವರ್ಷಗಳಾದರೂ ಬೇಕು ಎಂಬುದು ನಿರ್ಮಾಪಕರ ಮಾತು. ಅಕ್ಟೋಬರ್ 15ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ಆದರೆ, ಶೇ.50ರಷ್ಟು ವೀಕ್ಷಕರನ್ನು ತುಂಬಿಸುವಂತೆ ಕೇಂದ್ರ ಸರ್ಕಾರದ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನೇರವಾಗಿ ನಿರ್ಮಾಪಕರ ಮೇಲೆ ಬೀಳುವುದು ಖಚಿತ.
ನಿರ್ಮಾಣ ಹಂತದಲ್ಲಿದ್ದ 100ಕ್ಕೂ ಅಧಿಕ ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿವೆ. ಬಿಗ್ ಬಜೆಟ್ ಚಿತ್ರಗಳೆಂದು ಹೇಳಲಾಗುತ್ತಿರುವ ರಾಬರ್ಟ್, ಯುವರತ್ನ, ಕೆಜಿಎಫ್ ಚಾಪ್ಟರ್-2, ಕೋಟಿಗೊಬ್ಬ-3, ಪೊಗರು...ಹೀಗೆ ದೊಡ್ಡ ಸ್ಟಾರ್ಗಳ ಸಿನಿಮಾಗಳು ಈ ಸಮಯದಲ್ಲಿ ಬಿಡುಗಡೆಗೆ ನಿರ್ಮಾಪಕರು ಒಪ್ಪುತ್ತಿಲ್ಲ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದು, ಈ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ನಿರ್ಮಾಪಕರು ಕೋಟಿ ಕೋಟಿ ನಷ್ಟ ಅನುಭವಿಸುತ್ತಾರೆ. ಹೀಗಾಗಿ, ಬಿಗ್ ಬಜೆಟ್ ಸಿನಿಮಾಗಳು ಈ ವರ್ಷ ಬಿಡುಗಡೆ ಅನುಮಾನ.
ಲಾಕ್ಡೌನ್ನಿಂದ ಚಿತ್ರರಂಗಕ್ಕೆ ನೂರಾರು ಕೋಟಿ ನಷ್ಟ ಎದುರಾಗಿದೆ ಎನ್ನುತ್ತಾರೆ ಕನ್ನಡ ಚಿತ್ರಮಂದಿಗಳ ಸಂಘದ ಅಧ್ಯಕ್ಷ ಕೆ.ವಿ.ಚಂದ್ರುಶೇಖರ್. ರಾಜ್ಯ ಸರ್ಕಾರದ ಅಂಕಿ-ಅಂಶದ ಪ್ರಕಾರ ಸರ್ಕಾರ, ಒಂದು ವರ್ಷಕ್ಕೆ ಚಿತ್ರರಂಗದಿಂದ ರಾಜ್ಯ ಸರ್ಕಾರಕ್ಕೆ ₹100ರಿಂದ ₹625 ಕೋಟಿ ಆದಾಯ ಬರುತ್ತಿತ್ತು. ಇನ್ನು ಕನ್ನಡ ಚಿತ್ರರಂಗದಲ್ಲಿ ಒಂದು ವರ್ಷಕ್ಕೆ 4 ಸಾವಿರದಿಂದ, 5 ಸಾವಿರ ಕೋಟಿ ವಹಿವಾಟು ಆಗುತ್ತಿತ್ತು. ಇದನ್ನು ಲೆಕ್ಕ ಹಾಕಿದರೆ, ಎಳು ತಿಂಗಳಿಗೆ ಕನ್ನಡ ಚಿತ್ರರಂಗಕ್ಕೆ 2,500 ಸಾವಿರ ಕೋಟಿ ರೂಪಾಯಿ ನಷ್ಟ ಆಗಿದೆ ಎನ್ನುತ್ತಾರೆ ಅವರು.
ಇದರಲ್ಲಿ ಶೇ.30ರಷ್ಟು ಪ್ರದರ್ಶಕರಿಗೆ, ಶೇ.60 ರಿಂದ 70ರಷ್ಟು ವಿತರಕರಿಂದ ನಿರ್ಮಾಪಕರಿಗೆ ಆದಾಯ ಆಗುತ್ತದೆ. ಆದರೆ, ರಾಜ್ಯ ಸರ್ಕಾರಕ್ಕೆ ಜಿಎಸ್ಟಿ ರೂಪದಲ್ಲಿ ಚಿತ್ರರಂಗದಿಂದ ವರ್ಷಕ್ಕೆ ₹625 ಕೋಟಿ ಆದಾಯ ಇದೆ ಎಂಬುದು ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರುಶೇಖರ್ ಮಾತು. ಚಿತ್ರ ನೋಡಲು ಜನರ ಬಳಿ ಹಣವಿಲ್ಲ. ಪರಿಸ್ಥಿತಿ ಸುಧಾರಿಸಿದರೂ ಜನರು ಸಿನಿಮಾ ಹಾಲ್ಗೆ ಬಂದು ಹೆಚ್ಚೆಚ್ಚು ಜನರೊಂದಿಗೆ ಬರುವುದು ಅನುಮಾನ. ಇದೇ ಮಾತನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಗುಬ್ಬಿ ಜಯರಾಜ್ ಕೂಡ ಒಪ್ಪಿಕೊಳ್ಳುತ್ತಾರೆ.