ಬೆಂಗಳೂರು: ಚಿ.ತು. ಸಂಘ ಎಂಬ ಹೆಸರು ಕೇಳಿದ್ರೆ ಶರಣ್ ಹಾಗೂ ಚಿಕ್ಕಣ್ಣ ಅಭಿನಯದ 'ಅಧ್ಯಕ್ಷ' ಸಿನಿಮಾ ನೆನಪಾಗುತ್ತದೆ. ಇದೀಗ ಚಿ.ತು ಸಂಘ ಅಂತಾ ಟೈಟಲ್ ಇಟ್ಟುಕೊಂಡು ಸುಳ್ಳು ನಮ್ಮನೆ ದೇವ್ರು ಅಂತ ಅಡಿ ಬರಹ ಇಟ್ಟುಕೊಂಡು ಸ್ಯಾಂಡಲ್ವುಡ್ನಲ್ಲಿ ಚಿತ್ರವೊಂದು ಬರ್ತಿದೆ.
ನಿರ್ದೇಶಕ ಕಮ್ ನಟ ಚೇತನ್ ಕುಮಾರ್ ಸೇರಿದಂತೆ ಹೊಸಬರು ಸೇರಿಕೊಂಡು ನಿರ್ಮಾಣ ಮಾಡಿರೋ ಚಿ.ತು ಸಂಘ ಚಿತ್ರ ಶೂಟಿಂಗ್ ಮುಗಿಸಿ ರಿಲೀಸ್ಗೆ ರೆಡಿಯಾಗಿದೆ. ಈ ಹೊಸ ಚಿತ್ರತಂಡಕ್ಕೆ ಕಾನೂನು ಸಚಿವ ಜೆ.ಸಿ.ಮಧುಸ್ವಾಮಿ ಹಾರೈಸಿ, ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಇನ್ನು ಅತಿಥಿಯಾಗಿ ಬಂದಿದ್ದ ರೂಪಿಕಾ ಕೂಡ ಈ ಚಿತ್ರತಂಡಕ್ಕೆ ಶುಭ ಕೋರಿದ್ರು. ಎಂಟು ವರ್ಷಗಳ ಕಾಲ ಸಹ ನಿರ್ದೇಶಕನಾಗಿ ಕೆಲಸ ಮಾಡಿರೋ ಚೇತನ್ ಕುಮಾರ್, ನಟನೆ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ. ಇದೊಂದು ಹಳ್ಳಿ ಸೊಗಡಿನ ಕಥೆ ಆಧರಿಸಿರೋ ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಚೇತನ್ಗೆ ಜೋಡಿಯಾಗಿ ಯುವ ನಟಿ ರೂಪಾ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದಾರೆ.
ಬಬಿತಾ, ರತ್ನಚಂದನ, ಪೃಥ್ವಿ, ಗೌತಮ್ ರಾಜ್, ಆನಂದ್, ಲಕ್ಷ್ಮೀಕಾಂತ್, ರವಿಕೀರ್ತಿ, ಮುನ್ನ ಎಂ.ಪಿ.ರಾಜು, ಮಧುಸೂಧನ್, ನವೀನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಎಸ್.ಎ.ಆರ್.ಎನ್.ಎಸ್ ಇಂಟರ್ ನ್ಯಾಷನಲ್ ಮೂವಿ ಲಾಂಛನದಲ್ಲಿ ನಂದಿಹಳ್ಳಿ ಶಿವಣ್ಣ ಹಾಗೂ ಲಕ್ಷ್ಮೀಕಾಂತಯ್ಯ ಹಾಗೂ ಪಾರ್ವತಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿ ಸಂಗೀತ ನೀಡಿದ್ದಾರೆ. ರಣಧೀರ್ ನಾಯಕ್ ಛಾಯಾಗ್ರಹಣ, ಅರುಣ್ ರಾಜ್, ಚೇತನ್ ಕುಮಾರ್ ಸಂಕಲನ ಹಾಗೂ ದೇವರಾಜ್, ದಿವಾಕರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಚಿ.ತು ಸಂಘದ ಆಡಿಯೋ ಬಿಡುಗಡೆ ಮಾಡಿರೋ ಚಿತ್ರತಂಡ ಸದ್ಯದಲ್ಲೇ ಈ ಚಿತ್ರವನ್ನ ರಿಲೀಸ್ ಮಾಡಲು ಸಜ್ಜಾಗಿದೆ.