‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಇಂದಿಗೆ 50 ದಿನಗಳನ್ನು ಪೂರೈಸಿದೆ. ಆರಂಭದಲ್ಲಿ ಸ್ಪೀಡ್ ಆಗಿದ್ದ ಕಲೆಕ್ಷನ್ ಆಮೇಲೆ ಸ್ವಲ್ಪ ನಿಧಾನಗತಿಯಲ್ಲಿ ಸಾಗಿ 50 ದಿನಗಳನ್ನು ತಲುಪವಲ್ಲಿ ಯಶಸ್ಸು ಕಂಡಿದೆ. ಡಾ.ಮಂಜುನಾಥ್ ಡಿ.ಎಸ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ನಿಜ ಜೀವನದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಕುಮಾರ್ ಈ ಸಿನಿಮಾದ ಕಥೆ, ಚಿತ್ರಕಥೆ, ಗೀತ ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಕೂಡಾ ಮಾಡಿದ್ದರು. ತಬಲಾ ನಾಣಿ ಈ ಚಿತ್ರದ ಪ್ರಮುಖ ಆಕರ್ಷಣೆ . ಮಗನನ್ನು ಸಂರಕ್ಷಿಸುವ ಪಾತ್ರ, ಮನೆಯ ಗೌರವ ಕಾಪಾಡುವ ಪಾತ್ರ, ಮನೆಗೆ ಬಂದ ಸೊಸೆ ಯಾರದೋ ಮಾತು ಕೇಳಿ ಗಂಡನಿಗೆ ಡೈವೋರ್ಸ್ ಕೊಡುವ ಸ್ಥಿತಿಯನ್ನು ಕರಿಯಪ್ಪ ಹೇಗೆ ಕೋರ್ಟಿನ ಕಟಕಟೆಯಲ್ಲಿ ನಿರ್ವಹಿಸುತ್ತಾನೆ ಎಂಬುದು ಚಿತ್ರದ ಕ್ಲೈಮಾಕ್ಸ್.
ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ ಪರದೆಗಳಲ್ಲಿ ಹಾಗೂ ರಾಜ್ಯಾದ್ಯಂತ 10 ಚಿತ್ರಮಂದಿರಗಳಲ್ಲಿ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದು ನಿರ್ಮಾಪಕ ಡಿ.ಎಸ್. ಮಂಜುನಾಥ್ ಅವರ ಎರಡೇ ಸಿನಿಮಾ. ಅವರು ಮೊದಲು ನಿರ್ಮಿಸಿದ್ದ ಸಂಯುಕ್ತ-2 ಯಶಸ್ಸು ಕಾಣಲಿಲ್ಲ. ಆದರೆ ಕರಿಯಪ್ಪ ಇವರ ಕೈ ಹಿಡಿದಿದ್ದಾನೆ. ಶಿವಸೀನ ಛಾಯಾಗ್ರಹಣ, ಆರಾವ್ ರಿಶಿಕ್ ಸಂಗೀತ, ವೆಂಕಿ ಸಂಕಲನ, ಪುರುಷೋತ್ತಮ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ತಬಲಾ ನಾಣಿ ಜೊತೆ ನಾಯಕನಾಗಿ ಚಂದನ್ ಆಚಾರ್, ಸಂಜನ, ಅಪೂರ್ವ, ರಾಕ್ಲೈನ್ ಸುಧಾಕರ್, ಡಿ.ಎಸ್. ಮಂಜುನಾಥ್, ಹನುಮಂತೇ ಗೌಡ, ಸುಚೇಂದ್ರ ಪ್ರಸಾದ್, ಪ್ರಣವ್ ಮೂರ್ತಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.