ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಚಿತ್ರಗಳ ಜೊತೆಗೆ , ಕಂಟೆಂಟ್ ಓರಿಯೆಂಟೆಡ್ ಪ್ರಯೋಗಾತ್ಮಕ ಚಿತ್ರಗಳ ಟ್ರೆಂಡ್ ಶುರುವಾಗಿದೆ. ಅಲ್ಲದೆ ಹೊಸ ನಿರ್ದೇಶಕರ ವಿಭಿನ್ನವಾದ ಆಲೋಚನೆಗಳನ್ನು ಕನ್ನಡ ಸಿನಿರಸಿಕರು ಮೆಚ್ಚಿ ಬೆನ್ನು ತಟ್ಟಿದ್ದಾರೆ.
ಈ ಚಿತ್ರಗಳು ಭಾರತ ಮಾತ್ರವಲ್ಲದೆ, ಸಾಗರೋತ್ತರ ಕನ್ನಡಿಗರನ್ನು ಸೆಳೆಯುವಲ್ಲೂ ಯಶಸ್ವಿಯಾಗಿವೆ. ಈಗ ಇದೇ ರೀತಿ ವಿಭಿನ್ನ ಕಂಥಾ ಹಂದರ ಹಾಗೂ ನಿರೂಪಣೆಯ ಮೂಲಕ ಕನ್ನಡಿಗರ ಹೃದಯ ಗೆಲಲ್ಲು ಸಜ್ಜಾಗಿರುವ ಅಪ್ಪಟ ಕನ್ನಡ ಚಿತ್ರ ಅಂದರೆ 'ತ್ರಿಕೋನ'. ಹೆಸರಿಗೆ ತಕ್ಕಂತೆ ಮೂರು ಆಯಾಮಗಳ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಚಂದ್ರಕಾಂತ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಮತ್ತೊಬ್ಬ ನಿರ್ದೇಶಕ ರಾಜಶೇಖರ್ ಕಥೆ ಬರೆದಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರವನ್ನು ರಾಜಶೇಖರ್ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡಾ ಮಾಡಿದ್ದಾರೆ.

ಚಿತ್ರಕಥೆ, ಸಂಭಾಷಣೆ ಬರೆಯುವುದಕ್ಕೆ ನಿರ್ದೇಶಕ ಚಂದ್ರಕಾಂತ್ ಅವರಿಗೆ ರಾಜಶೇಖರ್ ಆಫರ್ ಕೊಟ್ಟಿದ್ದಾರೆ. ಅಂತೆಯೇ ಚಂದ್ರಕಾಂತ್ ಸುಮಾರು 3 ತಿಂಗಳ ಕಾಲ ಶ್ರಮ ವಹಿಸಿ ತಮ್ಮದೆ ಶೈಲಿಯಲ್ಲಿ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇದಕ್ಕೆ ಫಿದಾ ಆದ ನಿರ್ದೇಶಕ ರಾಜಶೇಖರ್, ನಾನು ಆಲೋಚಿಸಿದ ಕಥೆಯನ್ನು ಬಹಳ ವಿಭಿನ್ನವಾಗಿ ತೋರಿಸುತ್ತಿರುವ ನೀವೇ ಈ ಚಿತ್ರವನ್ನುನಿರ್ದೇಶನ ಮಾಡಿ ಎಂದು ಚಂದ್ರಕಾಂತ್ ಅವರಿಗೆ ಕನ್ನಡ ವರ್ಷನ್ ನಿರ್ದೇಶನವನ್ನು ಬಿಟ್ಟು ಕೊಟ್ಟೆ ಎಂದು ನಿರ್ಮಾಪಕ ರಾಜಶೇಖರ್ ಹೇಳಿದ್ಧಾರೆ.

ಯಾವುದೇ ಒಬ್ಬ ನಿರ್ದೇಶಕ ತನ್ನ ಕಥೆಯನ್ನು ಬೇರೊಬ್ಬರಿಗೆ ನಿರ್ದೇಶನ ಮಾಡುವುದಕ್ಕೆ ಒಪ್ಪುವುದಿಲ್ಲ. ಅದರೂ ಚಂದ್ರಕಾಂತ್ ಅದ್ಭುತವಾಗಿ ಸಂಭಾಷಣೆ ಬರೆದ ಕಾರಣ ಚಿತ್ರವನ್ನು ಅವರು ನಿರ್ದೇಶನ ಮಾಡಿದರೆ ಚೆಂದ ಎಂದು ಬಿಟ್ಟುಕೊಟ್ಟೆ ಎಂದು ಹೇಳಿದ್ದಾರೆ. ಅವರು ನನ್ನ ನಿರೀಕ್ಷೆಯನ್ನು ಹುಸಿ ಗೊಳಿಸದ ರೀತಿ ಎಲ್ಲಾ ಜವಾಬ್ದಾರಿ ತೆಗೆದುಕೊಂಡು ಬಂದ ಸಮಸ್ಯೆಗಳನ್ನೆಲ್ಲಾ ನಿಭಾಯಿಸಿ ಸಂಪೂರ್ಣ ಶೂಟಿಂಗ್ ಮುಗಿಸಿ ಕೊಟ್ಟರು.

'ತ್ರಿಕೋನ' ವಿಭಿನ್ನ ಕಥೆ ಹೊಂದಿರುವ ಕಾರಣ ಕನ್ನಡ, ತೆಲುಗು, ತಮಿಳು ಮೂರೂ ಭಾಷೆಗಳಲ್ಲಿ ಮಾಡಲಾಗಿದೆ. ಕನ್ನಡ ವರ್ಷನ್ ಚಂದ್ರಕಾಂತ್ ನಿರ್ದೇಶನ ಮಾಡಿದರೆ, ತಮಿಳು, ತೆಲುಗು ಭಾಗವನ್ನು ನಾನು ನಿರ್ದೇಶನ ಮಾಡಿದ್ದೇನೆ. ಮೂರು ಭಾಷೆಗಳಲ್ಲೂ ಬೇರೆ ಬೇರೆ ತಂತ್ರಜ್ಞರು ನಮ್ಮ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಕನ್ನಡ ವರ್ಷನ್ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಚಂದ್ರಕಾಂತ್ ಮುಗಿಸಿದ್ದಾರೆ. ನಾನು ತಮಿಳು, ತೆಲುಗು ವರ್ಷನ್ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿದ್ದೇನೆ ಎಂದು ರಾಜಶೇಖರ್ ಮಾಹಿತಿ ನೀಡಿದ್ದಾರೆ.

ಕನ್ನಡದ 'ತ್ರಿಕೋನ'ವನ್ನು ಇದುವರೆಗೂ ನಾನು ನೋಡಿಲ್ಲ. ತಮಿಳು, ತೆಲುಗು ವರ್ಷನ್ ಚಂದ್ರಕಾಂತ್ ನೋಡಿಲ್ಲ. ಸದ್ಯ ಎಲ್ಲಾ ಕೆಲಸ ಮುಗಿದಿದೆ. ಯಾವುದೇ ಕಟ್, ಮ್ಯೂಟ್ ಇಲ್ಲದೆ ಸೆನ್ಸಾರ್ ಯು/ಎ ಸರ್ಟಿಫಿಕೇಟ್ ನೀಡಿದೆ. ಕೊರೊನಾ ಸಮಸ್ಯೆ ಬಗೆಹರಿದ ನಂತರ 'ತ್ರಿಕೋನ' ಪ್ರೇಕ್ಷಕರಿಗೆ ಲಭ್ಯವಾಗಲಿದೆ ಎಂದು ರಾಜಶೇಖರ್ ಹೇಳುತ್ತಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರದಲ್ಲಿ ಸಾಧು ಕೋಕಿಲ, ಸುರೇಶ್ ಹೆಬ್ಳೀಕರ್, ಹಿರಿಯ ನಟಿ ಲಕ್ಷ್ಮಿ, ಸುಧಾರಾಣಿ ,ಅಚ್ಯುತ್ ರಾವ್, ಮಾರುತೇಶ್ ಹಾಗೂ ಇನ್ನಿತರರು ನಟಿಸಿದ್ದಾರೆ.