ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಮಾರ್ಚ್ 1ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಹಾಜರಾಗಿ ಚಿತ್ರದ ಬಗ್ಗೆ ಮಾತನಾಡಿದೆ.
ಮಾರ್ಚ್ 1ರಂದು ದೇಶಾದ್ಯಂತ ಹಾಗೂ ಹೊರ ದೇಶಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿರುವುದಾಗಿ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ತಿಳಿಸಿದ್ರು. ಚಿತ್ರವನ್ನು ಪಿ. ಕುಮಾರ್ ಹಾಗೂ ವಿ.ಹರಿಕೃಷ್ಣ ಇಬ್ಬರೂ ಸೇರಿ ನಿರ್ದೇಶಿಸಿದ್ದಾರೆ. ವಿ.ಹರಿಕೃಷ್ಣ ಚಿತ್ರದ ಹಾಡುಗಳಿಗೆ ಸಂಗೀತ ಕೂಡಾ ನೀಡಿದ್ದಾರೆ. ಇನ್ನು ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.
ನಟ ದರ್ಶನ್ ಮಾತನಾಡಿ, 'ಈ ಸಿನಿಮಾ ಮೇಲಿನ ನಿರೀಕ್ಷೆ ಸುಳ್ಳಾಗುವುದಿಲ್ಲ. ಇದು ಪಕ್ಕಾ ಕನ್ನಡ ಸೊಗಡಿರುವ ಚಿತ್ರ. ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಯಜಮಾನ ಸಿನಿಮಾಗೂ ನಮ್ಮ ಯಜಮಾನ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಚಿತ್ರ ಬಿಡುಗಡೆಯಾಗುವವರೆಗೂ ತಾಳ್ಮೆಯಿಂದ ಇರುವಂತೆ' ದರ್ಶನ್ ಮನವಿ ಮಾಡಿದರು.
ಒಟ್ಟಿನಲ್ಲಿ ಎರಡು ವರ್ಷಗಳ ನಂತರ ದರ್ಶನ್ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವುದು ಖಚಿತ ಎನ್ನಲಾಗುತ್ತಿದೆ.