ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಡಿ ಹಕ್ಕಿ ಧಾರಾವಾಹಿಯಲ್ಲಿ ಜಾನಕಿ ಟೀಚರ್ ಆಗಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಚೈತ್ರಾರಾವ್ ಇಂದು ಸಖತ್ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ತಾವು ಅಭಿನಯಿಸಿದ ಮಾಯಾ ಬಜಾರ್ ಸಿನಿಮಾ ರಿಲೀಸ್ ಆಗಿದೆ.

ಮೊದಲ ಧಾರಾವಾಹಿಯಲ್ಲೇ ಕಿರುತೆರೆ ಪ್ರಿಯರ ಗಮನ ಸೆಳೆದಿರುವ ಚೈತ್ರಾರಾವ್ ಅಭಿನಯದ ಚಿತ್ರ ಮಾಯಾ ಬಜಾರ್ ಇಂದು ಬಿಡುಗಡೆಯಾಗಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಮಾಯಾ ಬಜಾರ್ನಲ್ಲಿ ನಾಯಕ ವಸಿಷ್ಠ ಸಿಂಹ ಜೊತೆ ತೆರೆ ಹಂಚಿಕೊಂಡಿರುವ ಚೈತ್ರಾರಾವ್, ಬೆಳ್ಳಿತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.

ಮಾಯಾ ಬಜಾರ್ನಲ್ಲಿ ಸಹನಾ ಎಂಬ ಕಾಲೇಜು ವಿದ್ಯಾರ್ಥಿನಿಯಾಗಿ ಅಭಿನಯಿಸಿರುವ ಚೈತ್ರಾ, ಬದುಕು ಎಂದ ಮೇಲೆ ಒಂದಷ್ಟು ತಿರುವುಗಳು ಬರುತ್ತವೆ. ಎಲ್ಲರ ಬಾಳಿನಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಬರುವ ತಿರುವು ಸಹನಾ ಬಾಳಲ್ಲಿ ಬಂದಾಗ ಏನಾಗುತ್ತದೆ? ಅದನ್ನು ಅವಳು ಯಾವ ರೀತಿಯಲ್ಲಿ ನಿಭಾಯಿಸುತ್ತಾಳೆ ಎಂಬುದೇ ಚಿತ್ರದ ಕಥೆ ಎಂದು ಸಹನಾ ಪಾತ್ರವನ್ನು ಚೈತ್ರಾ ವಿವರಿಸಿದ್ದಾರೆ.

ಅದ್ಯಾವಾಗಲೋ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ಕುಮಾರ್ ಅವರೊಂದಿಗೆ ಫೋಟೋ ತೆಗೆಸಿದ್ದೆ. ಇದೀಗ ಅವರದ್ದೇ ಸ್ವಂತ ಬ್ಯಾನರ್ಅಡಿಯಲ್ಲಿ ನಟಿಸಿದ್ದೇನೆ. ಮಾತ್ರವಲ್ಲ ಅವರೊಂದಿಗೆ ಕುಳಿತು ಮಾತನಾಡುವ ಅವಕಾಶ ಕೂಡಾ ದೊರೆತಿದೆ ಎಂದು ಬಹಳ ಖುಷಿಯಿಂದ ಹೇಳುತ್ತಾರೆ ಚೈತ್ರಾ.

ಇದರ ಜೊತೆಗೆ ವಸಿಷ್ಠ ಸಿಂಹ ಅವರೊಂದಿಗೆ ನಟಿಸಿರುವುದು ಒಂದು ಒಳ್ಳೆಯ ಅನುಭವ ಎಂದರೆ ಸುಳ್ಳಲ್ಲ. ಅವರಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತೆ ಎಂದು ಚೈತ್ರಾ ಹೆಳಿದ್ದಾರೆ.