'ತ್ರಿಕೋನ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್, ಮ್ಯೂಟ್ ಇಲ್ಲದೆ ಯು/ಎ ಪ್ರಮಾಣ ಪತ್ರವನ್ನು ನೀಡಿದೆ. '143' ಚಿತ್ರದ ಮೂಲಕ ಹೆಸರಾಗಿದ್ದ ಚಂದ್ರಕಾಂತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
'ತ್ರಿಕೋನ' ಚಿತ್ರ ಒಂದು ವಿಭಿನ್ನ ಪ್ರಯತ್ನ ಎಂದು ಚಿತ್ರತಂಡ ಹೇಳಿದೆ. ಚಂದ್ರಕಾಂತ್ ಅವರ '143' ಕೂಡಾ ವಿಭಿನ್ನ ಕಥಾಹಂದರ ಹೊಂದಿತ್ತು. ಇದೀಗ ಈ ಸಿನಿಮಾದಲ್ಲಿ ಕೂಡಾ ಸಹನೆ, ಅಹಂ ಹಾಗೂ ಶಕ್ತಿ ಸಂಗಮ ಹೇಗೆ ಇರುತ್ತದೆ ಎಂಬುದನ್ನು ತೋರಿಸಲಾಗಿದೆ. ಈ ಚಿತ್ರಕ್ಕೆ ರಾಜಶೇಖರ್ ಚಿತ್ರಕಥೆ ಬರೆದು ನಿರ್ಮಾಣ ಕೂಡಾ ಅವರೇ ಮಾಡಿದ್ಧಾರೆ. ಚಿತ್ರವನ್ನು ಕನ್ನಡ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗುತ್ತಿದೆ.
ನಾಲ್ಕು ಹಂತಗಳಲ್ಲಿ ಬೆಂಗಳೂರು, ಕುಕ್ಕೆ ಸುಬ್ರಮಣ್ಯ, ಪುತ್ತೂರು, ಮಂಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. 25, 40, 60 ವರ್ಷ ಮೇಲ್ಪಟ್ಟ ವ್ಯಕ್ತಿಗಳ ಮೂರು ಹಂತವನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ರಾಜ್ವೀರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಇವರೊಂದಿಗೆ ಸುಧಾರಾಣಿ, ಅಚ್ಯುತ್ ಕುಮಾರ್ , ಸುರೇಶ್ ಹೆಬ್ಳೀಕರ್, ಲಕ್ಷ್ಮಿ, ಸಾಧು ಕೋಕಿಲ ನಟಿಸಿದ್ಧಾರೆ. ಬಳ್ಳಾರಿಯ ಬಾಡಿ ಬಿಲ್ಡರ್ ಮಾರುತೇಶ್ ಎಂಬುವವರು ಈ ಮೂರೂ ಹಂತದ ಪಾತ್ರಗಳನ್ನು ಪರೀಕ್ಷೆಗೆ ಒಳಪಡಿಸುವ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಎರಡು ಹಾಡುಗಳಿಗೆ ಸುರೇಂದ್ರನಾಥ್ ಸಂಗೀತವಿದೆ. ಶ್ರೀನಿವಾಸ್ ಛಾಯಾಗ್ರಹಣ ಹಾಗೂ ತಿರುಮಲೇಶ್ ಸಂಕಲನ ಮಾಡಿದಾರೆ. ಈಗಾಗಲೇ ಮೂರು ಭಾಷೆಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಭಾರೀ ಸದ್ದು ಮಾಡುತ್ತಿದೆ.